ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಕರ್ವಿ (ರಕ್ತಪಿತ್ತವ್ಯಾಧಿ)

ವಿಕಿಸೋರ್ಸ್ದಿಂದ

ಸ್ಕರ್ವಿ (ರಕ್ತಪಿತ್ತವ್ಯಾಧಿ) ಆರೋಗ್ಯವರ್ಧಕ ಆಹಾರದ ಸೇವನೆಯ ಕ್ರಮ ತಪ್ಪಿದಲ್ಲಿ ತಲೆದೋರುವ ರೋಗ. ಆಸ್ಕಾರ್ಬಿಕ್ ಆಮ್ಲದ (ಸಿ ಜೀವಸತ್ತ್ವ) ದೀರ್ಘಕಾಲಿಕ ಕೊರತೆಯಿಂದ ಇದು ತಲೆದೋರುತ್ತದೆ. ಬ್ರಿಟಿಷ್ ನೌಕಾಪಡೆಯ ಅಧಿಕಾರಿಯಾಗಿದ್ದ ಜೋಸೆಫ್ ಲಿಂಡ ಇದನ್ನು ಪತ್ತೆಮಾಡಿದ (1753). ನಮ್ಮ ದೇಹದ ಜೀವಕೋಶಗಳ ಮತ್ತು ಅಂತಃಕೋಶಗಳ ರಚನೆ ದೃಢವಾಗಿರಲು ಸಿ ಜೀವಸತ್ತ್ವ ಅತ್ಯಗತ್ಯ. ತಾಜಾ ಹಣ್ಣುಗಳಲ್ಲಿಯೂ ಕಬ್ಬು, ಮಾಂಸಗಳಲ್ಲಿಯೂ ಇದು ಹೇರಳವಾಗಿದೆ. ವಯಸ್ಕ ಮಾನವರ ದೈನಂದಿನ ಆವಶ್ಯಕತೆಯಲ್ಲಿ ಇದು ಸರಾಸರಿ 50 ಮಿಗ್ರಾಮ್ ಇರುವುದು ಅವಶ್ಯ.

ಸ್ಕರ್ವಿ ರೋಗ ಕಾಲಕ್ರಮೇಣ ಬಲಿಯುವುದು. ಆರಂಭದಲ್ಲಿ ನಿರುತ್ಸಾಹ, ಜಡತೆ, ಆಲಸಿಕೆ, ಕೈಕಾಲುಗಳಲ್ಲಿ ಬಲಹೀನತೆ ಈ ಲಕ್ಷಣಗಳು ಕಂಡುಬರುತ್ತವೆ. ರೋಗ ಉಲ್ಬಣಿಸಿದಾಗ ಒಸಡು, ಮೂಗು ಮತ್ತು ಮಾಂಸಖಂಡಗಳಲ್ಲಿಯೂ ಮೂಳೆ ಮೇಲುಪೊರೆಯಲ್ಲಿಯೂ ರಕ್ತಸ್ರಾವ ಉಂಟಾಗಬಹುದು. ಬಾಲ್ಯದಲ್ಲಿ ಸಹ ಈ ರೋಗ ಅನೇಕರಿಗೆ ಬರುತ್ತದೆ.

ರೋಗಿಗೆ ಪ್ರತಿನಿತ್ಯವೂ ಸು. 250 ಮಿಗ್ರಾಮ್ ಸಿ ಜೀವಸತ್ತ್ವ ಕೊಡುವುದರಿಂದಲೂ ಕಿತ್ತಳೆ ಹಣ್ಣಿನರಸದ ಸೇವನೆಯಿಂದಲೂ ಈ ವ್ಯಾಧಿಯನ್ನು ಗುಣಪಡಿಸಬಹುದು. ಉಲ್ಬಣಾವಸ್ಥೆಯಲ್ಲಿ ಈ ಪ್ರಮಾಣವನ್ನು ಇನ್ನೂ ಹೆಚ್ಚಿಸಬೇಕು.

    (ಎಚ್.ಎಸ್.ಎಸ್.)