ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಕೇಬಿಸ್

ವಿಕಿಸೋರ್ಸ್ದಿಂದ

ಸ್ಕೇಬಿಸ್ - ಕಡಿತ ಅಥವಾ ತುರಿಕೆ ಉಂಟುಮಾಡುವ ಒಂದು ಸಾಂಕ್ರಾಮಿಕ ರೋಗ. ಕಜ್ಜಿ, ಇಸಬು, ಹುರುಕು ಪರ್ಯಾಯ ಪದಗಳು. ಒಂದು ಜಾತಿಯ ಉಣ್ಣಿಗಳ ಕಡಿತದಿಂದ ಹರಡುವ ರೋಗವಿದು. ಚಿಕ್ಕಮಕ್ಕಳಲ್ಲಿ, ಮಾನಸಿಕ ರೋಗಿಗಳಲ್ಲಿ, ನಿಬಿಡ ಜನವಸತಿ ಇರುವಲ್ಲಿ ಇದು ವ್ಯಾಪಕವಾಗಿ ಹಬ್ಬಿರುತ್ತದೆ. ವ್ಯಕ್ತಿಯ ದೇಹ ಹೊಕ್ಕ ಉಣ್ಣಿಗಳು ಚರ್ಮದಲ್ಲಿ ಸೂಕ್ಷ್ಮ ರಂಧ್ರ ಕೊರೆದು ಒಳಹೋಗುತ್ತವೆ. ಅದರ ದ್ವಾರದಲ್ಲಿ ನೀರ್ಗುಳ್ಳೆ ಕಂಡುಬರುವುದು. ರಂಧ್ರದೊಳಗೆ ತಾಯಿ ಉಣ್ಣಿ, ಮೊಟ್ಟೆ ಮತ್ತು ಮರಿಗಳಿರುತ್ತವೆ. ಯುಕ್ತ ಕಾಲ ಬಂದಾಗ ತಾಯಿ ಉಣ್ಣಿ ತನ್ನ ಸ್ರವಿಕೆಯನ್ನು ಸೂಸುತ್ತದೆ. ಆಗ ವ್ಯಕ್ತಿಗೆ ಆ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಅಲ್ಲಿ ಆತ ಕೈ ಆಡಿಸಿ ಕೆರೆದಾಗ ಗುಳ್ಳೆ ಒಡೆದು ಮರಿಗಳು ಹೊರಬಂದು ಅದೇ ವ್ಯಕ್ತಿಯ ದೇಹದ ಬೇರೊಂದು ಭಾಗಕ್ಕೆ ವಲಸೆಹೋಗಬಹುದು ಅಥವಾ ಆತನೊಡನೆ ಸಂಪರ್ಕಕ್ಕೆ ಬರುವ ಇತರರ ದೇಹಗಳಿಗೆ ವರ್ಗಾವಣೆಗೊಳ್ಳಬಹುದು. ಕಜ್ಜಿಗೆ ಅವಶ್ಯವಾದ ಮದ್ದು, ಲೇಪ ಮುಲಾಮುಗಳು ಹೇರಳವಾಗಿ ಲಭ್ಯ. ಇವನ್ನು ಉಪಯೋಗಿಸಿ ಸ್ಕೇಬಿಸ್‍ನಿಂದ ಮುಕ್ತರಾಗಬಹುದು. (ಎಸ್.ಕೆ.ಎಚ್.)