ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೀರಾಯ್ಡ್‌

ವಿಕಿಸೋರ್ಸ್ದಿಂದ

ಸ್ಟೀರಾಯ್ಡ್ ಜೀವಿಗಳಲ್ಲಿರುವ ಅನೇಕ ಸಂಕೀರ್ಣ ಹೈಡ್ರೊಕಾರ್ಬನ್ ಗಳ ಪೈಕಿ ಯಾವುದೇ ಒಂದು. ಇವೆಲ್ಲವೂ ಒಂದು ಜಾತಿಯ ರಾಸಾಯನಿಕಗಳು. ಇವುಗಳ ಮೂಲರಚನೆಯಲ್ಲಿ ಒಂದು ಚಕ್ರವಿದೆ. ಈ ಗುಂಪಿಗೆ 11 ಬಗೆಯವು ಸೇರಿವೆ. ಪ್ರೊಜೆಸ್ಟಿರಾನ್, ಅಡ್ರಿನಲ್ ಕಾರ್ಟಿಕಲ್ ಹಾರ್ಮೋನ್, ಜನನ ಗ್ರಂಥಿಗಳ ಹಾರ್ಮೋನ್, ಹೃದಯ ಗ್ಲೈಕೊಸೈಡ್, ಪಿತ್ತಾಮ್ಲ, ಕೊಲೆಸ್ಟಿರಾಲ್, ಕಪ್ಪೆ ವಿಷ, ಸ್ಯಾಪೊನಿನ್‍ಗಳು, ಕ್ಯಾನ್ಸರ್‍ಕಾರಕ ಹೈಡ್ರೊಕಾರ್ಬನ್, ಉಪಚಯಕ (ಅನಬಾಲಿಕ್) ಸ್ಟೀರಾಯ್ಡ್ ಮತ್ತು ಟೆಸ್ಟೊಸ್ಟಿರಾನ್. ಹಲವು ಬಗೆಯ ಕಾಯಿಲೆಗಳಲ್ಲಿ ಇವನ್ನು ಔಷಧಿಗಳಾಗಿ ಬಳಸುತ್ತಾರೆ.

ಉತ್ಪಾದನೆ: ಇದು ಮುಖ್ಯವಾಗಿ ಅಡ್ರಿನಲ್ ಮತ್ತು ಜನನ ಗ್ರಂಥಿಗಳಲ್ಲಿ ನಡೆಯುತ್ತದೆ. ಕೆಲವು ಸಸ್ಯಮೂಲ ರಾಸಾಯನಿಕಗಳನ್ನು ಪರಿವರ್ತಿಸಿ ಸ್ಟೀರಾಯ್ಡ್‍ಗಳನ್ನು ತಯಾರಿಸುವುದು ಸಾಧ್ಯವೆಂದು ಗೊತ್ತಾಗಿದೆ. ಇಂಥವುಗಳ ತಯಾರಿಕೆ ಕಡಿಮೆ ವೆಚ್ಚದಲ್ಲಿ ಸಾಧ್ಯ.

ಉಪಯೋಗ: ಅಲರ್ಜಿ, ಊತ, ಉರಿಯೂತ, ತ್ವಚೆಯ ಉರಿಯೂತ — ಇಂಥ ಅಸುಖಗಳ ನಿವಾರಣೆಗೂ ಜನನ ನಿರೋಧಕಗಳಾಗಿ ಮತ್ತು ಹಾರ್ಮೋನ್ ಅಭಾವ ನಿವಾರಕಗಳಾಗಿಯೂ ಸ್ಟೀರಾಯ್ಡುಗಳ ಉಪಯೋಗ ಉಂಟು.

ಕಾರ್ಟಿಸೋನ್, ಆಲ್ಡೊಸ್ಟಿರೋನ್, ಪ್ರೆಡ್ನಿಸೋನ್ ಮತ್ತು ಪ್ರೆಡ್ನಿಸ ಲೋನ್ ಪ್ರಮುಖ ಸ್ಟೀರಾಯ್ಡುಗಳು. ಈಚಿನ ದಿನಗಳಲ್ಲಿ ಸ್ಟೀರಾಯ್ಡು ಗಳನ್ನು ಜೈವತಂತ್ರವಿದ್ಯಾವಿಧಾನದಿಂದ ತಯಾರಿಸಲಾಗುತ್ತಿದೆ. (ಎಸ್.ಕೆ.ಎಚ್.)