ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ತ್ರೀರೋಗಗಳು

ವಿಕಿಸೋರ್ಸ್ದಿಂದ

ಸ್ತ್ರೀರೋಗಗಳು - ಪ್ರಸ್ತುತ ಲೇಖನದಲ್ಲಿ ಮಹಿಳೆಗೇ ಸಂಬಂಧಿಸಿದ ವ್ಯಾಧಿಗಳನ್ನು 5 ವರ್ಗಗಳಲ್ಲಿ ಅಭ್ಯಸಿಸಿದೆ. 1. ಜನನೇಂದ್ರಿಯ ಸಂಬಂಧೀ ವ್ಯಾಧಿಗಳು: ಹೆಣ್ಣಿಗೆ ತಾಯ್ತನ ಪ್ರಕೃತಿ ಕೊಟ್ಟ ವಿಶಿಷ್ಟ ವರ. ಆದರೆ ಈ ವರದ ಜೊತೆಯಲ್ಲೇ ಬರುವ ಶಾಪ ಎಂದರೆ ಜನನೇಂದ್ರಿಯ ಮತ್ತು ಲೈಂಗಿಕಸಂಪರ್ಕದ ಸೋಂಕು ರೋಗಗಳು. ಇವು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬರುವ ಸ್ತ್ರೀರೋಗಗಳು. ಜನನಾಂಗಮಾರ್ಗದ ಸೋಂಕು ಎಂದರೆ ಯೋನಿ, ಗರ್ಭದ್ವಾರ, ಗರ್ಭಕೋಶ, ಗರ್ಭನಾಳ ಮತ್ತು ಅಂಡಾಶಯದ ಸೋಂಕಿನಿಂದುಂಟಾಗುವ ಕಾಯಿಲೆಗಳು: ಪರಂಗಿರೋಗ (ಸಿಫಿಲಿಸ್), ಬಿಳುಪು ಸುರಿಕೆ (ಗೊನೊರಿಯ), ಏಡ್ಸ್‍ರೋಗ, ಬಿಳಿಸೆರಗು, ಉರಿಮೂತ್ರರೋಗ ಇತ್ಯಾದಿ.

ಕಾರಣಗಳು: ವೈಯಕ್ತಿಕ ಅಶುಚಿತ್ವ, ಸುರಕ್ಷಿತವಲ್ಲದ ಗರ್ಭಪಾತ, ಸುರಕ್ಷಿತವಲ್ಲದ ಹೆರಿಗೆ ಮತ್ತು ಸುರಕ್ಷಿತವಲ್ಲದ ಲೈಂಗಿಕಸಂಪರ್ಕ.

ಲಕ್ಷಣಗಳು: ಜನನೇಂದ್ರಿಯತುರಿಕೆ, ಉರಿ, ಹುಣ್ಣು, ನೋವು ಮತ್ತು ವಾಸನೆಯಿಂದ ಕೂಡಿದ ಯೋನಿಸ್ರಾವ. ಕೆಳಹೊಟ್ಟೆನೋವು, ಆಯಾಸ, ಚಳಿಜ್ವರ, ಉರಿಮೂತ್ರ ಮತ್ತು ಮುಟ್ಟಿನ ತೊಂದರೆಗಳು, ದುಗ್ಧರಸ ಗ್ರಂಥಿಗಳ ಊತ ಇತ್ಯಾದಿ.

ದುಷ್ಪರಿಣಾಮಗಳು: ಮುಟ್ಟಿನ ತೊಂದರೆಗಳು, ಬಂಜೆತನ, ಗರ್ಭಪಾತ, ಬೇರೆ ಸ್ಥಳದಲ್ಲಿ ಗರ್ಭಧಾರಣೆ, ಉರಿಮೂತ್ರರೋಗ, ಎಚ್.ಐ.ವಿ./ಏಡ್ಸ್‍ರೋಗ, ನವಜಾತ ಶಿಶುವಿಗೆ ಸೋಂಕುರೋಗಗಳು.

ತಡೆಗಟ್ಟುವ ಕ್ರಮ: ಸೋಂಕಿನಿಂದ ರಕ್ಷಣೆ, ಕಾಯಿಲೆಗೆ ಯುಕ್ತ ಸಲಹೆ ಮತ್ತು ಚಿಕಿತ್ಸೆ, ಸುರಕ್ಷಿತ ಗರ್ಭಪಾತ, ಸುರಕ್ಷಿತ ಹೆರಿಗೆ, ಸುರಕ್ಷಿತ ಲೈಂಗಿಕಜೀವನದ ಬಗ್ಗೆ ತಿಳಿವಳಿಕೆ, ವೈಯಕ್ತಿಕ ಸ್ವಚ್ಛತೆ.

ಚಿಕಿತ್ಸೆ: ಯುಕ್ತ ವೇಳೆಯಲ್ಲಿ ಸಲಹೆ ಮತ್ತು ಪ್ರಾರಂಭದಲ್ಲಿಯೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಬಹುದು. 2. ಸ್ತನಸಂಬಂಧೀ ರೋಗಗಳು: ಎರಡು ಬಗೆಗಳಿವೆ: (ಅ) ಸ್ತನಗಳ ಸೋಂಕುರೋಗ: ಎದೆಬಾವು, ಎದೆಯೂತ (ಸೂಕ್ಷ್ಮಾಣುಜೀವಿಗಳಿಂದುಂಟಾಗುವ ಸೋಂಕು); (ಆ) ಸ್ತನಗಳ ಗೆಡ್ಡೆಗಳು: ಸಾಧಾರಣ ಗೆಡ್ಡೆಗಳು (ಫೈಬ್ರೊಅಡಿನೋಮ), ಅರ್ಬುದಗೆಡ್ಡೆಗಳು (ಕ್ಯಾನ್ಸರ್).

ಲಕ್ಷಣಗಳು: ನೋವು, ಎದೆಬಾವು, ಕೀವು ಸುರಿಯುವುದು, ಚಳಿಜ್ವರ ಇತ್ಯಾದಿ, ನೋವು ಮೂಡಿಸದೆ ಓಡಾಡುವ ಗೆಡ್ಡೆಗಳು (ಫೈಬ್ರೊಅಡಿನೋಮ), ಗಟ್ಟಿಯಾದ ಅರ್ಬುದ ಗೆಡ್ಡೆಗಳು (ಕ್ಯಾನ್ಸರ್).

ತಡೆಗಟ್ಟುವ ಕ್ರಮ: ಆಗಾಗ ಮತ್ತು ಸಂದೇಹ ಬಂದಾಗ ಸ್ತನಗಳ ಪರೀಕ್ಷೆ, ಮೆಮ್ಮೋಗ್ರಫಿ ಪರೀಕ್ಷೆ. ಚಿಕಿತ್ಸೆ: ಶಸ್ತ್ರಚಿಕಿತ್ಸೆ. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.

3. ಋತುಚಕ್ರಸಂಬಂಧೀ ರೋಗಗಳು: ಹೆಣ್ಣಿನ ಜೀವನದಲ್ಲಿ ಋತುಚಕ್ರ ಒಂದು ನೈಸರ್ಗಿಕ ಜೈವಿಕಕ್ರಿಯೆ. ಕ್ರಮಬದ್ಧವಾಗಿ ನಿಯಮಿತವಾಗಿ ಪ್ರತಿ ತಿಂಗಳಿಗೊಮ್ಮೆ ಬರುವ ಋತುಚಕ್ರ ಶಾರೀರಿಕ ಕ್ರಿಯೆ ದೇಹದಲ್ಲಿ ಸಮರ್ಪಕವಾಗಿ ನಡೆಯುತ್ತಿರುವುದರ ಪ್ರತೀಕ. ಇದರಲ್ಲಿ ಏರುಪೇರುಂಟಾದಾಗ ಅದಕ್ಕೆ ಸರಿಯಾದ ಕಾರಣವನ್ನು ಪತ್ತೆಹಚ್ಚಿ ಯುಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು.

ಲಕ್ಷಣಗಳು: ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವು, ಹೆಚ್ಚಿನ ರಕ್ತಸ್ರಾವ, ಋತುಚಕ್ರದಲ್ಲಿ ಏರುಪೇರು.

ಕಾರಣಗಳು: ಚೋದಕದ (ಹಾರ್ಮೋನಿನ) ಅಂಶದಲ್ಲಿ ಏರುಪೇರು, ಗರ್ಭಕೋಶದಲ್ಲಿಯ ಗೆಡ್ಡೆಗಳು (ಫೈಬ್ರಾಯ್ಡ್ ಟ್ಯೂಮರ್), ಅಂಡಾಶಯದ ಗೆಡ್ಡೆಗಳು (ಒವೇರಿಯನ್ ಗೆಡ್ಡೆ), ಗರ್ಭಕೋಶದ ಕ್ಯಾನ್ಸರ್, ಗರ್ಭದ್ವಾರದ ಅರ್ಬುದ ರೋಗ, ಗರ್ಭಕೋಶದ ಸೋಂಕುರೋಗಗಳು, ಕೆಲವು ಔಷಧಗಳ ಸೇವನೆ (ಓರಲ್ ಪಿಲ್) ಇತ್ಯಾದಿ.

ದುಷ್ಪರಿಣಾಮಗಳು: ರಕ್ತಹೀನತೆ, ಆಯಾಸ, ಜ್ವರ, ಕೆಳಹೊಟ್ಟೆನೋವು, ಅರ್ಬುದರೋಗ, ಅತಿಗಾತ್ರದ ಗೆಡ್ಡೆಗಳಿಂದ ಹೊಟ್ಟೆಭಾರ, ಸುಸ್ತು.

ತಡೆಗಟ್ಟುವ ಕ್ರಮ: ಯುಕ್ತ ಸಲಹೆ ಮತ್ತು ಕ್ರಮಬದ್ಧವಾಗಿ ತಪಾಸಣೆ.

ಚಿಕಿತ್ಸೆ: ಹಾರ್ಮೋನಿನ ಚಿಕಿತ್ಸೆ, ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆ, ಅರ್ಬುದರೋಗಕ್ಕೆ ಯುಕ್ತ ಚಿಕಿತ್ಸೆ.

4. ಜನನೇಂದ್ರಿಯದ ಅರ್ಬುದ ರೋಗಗಳು: ನಲವತ್ತು ದಾಟಿದ ಅನಂತರ ಕಂಡುಬರುವ ಸ್ತ್ರೀರೋಗಗಳಲ್ಲಿ ಮುಖ್ಯವಾದದ್ದು ಜನನೇಂದ್ರಿಯದ ಅರ್ಬುದರೋಗ. ಇದೊಂದು ಮಾರಕರೋಗ. ಜನನೇಂದ್ರಿಯದ ಎಲ್ಲ ಅಂಗಗಳಲ್ಲೂ ಕಂಡುಬರುತ್ತದೆ. ಸಾಧಾರಣವಾಗಿ ಎದ್ದುಕಾಣುವುದು ಗರ್ಭದ್ವಾರದ ಅರ್ಬುದರೋಗ (ಕ್ಯಾನ್ಸರ್ ಸರ್ವಿಕ್ಸ್), ಗರ್ಭಕೋಶದ ಕ್ಯಾನ್ಸರ್‍ರೋಗ (ಎಂಡೊಮೆಟ್ರಿಯಲ್ ಕ್ಯಾನ್ಸರ್) ಮತ್ತು ಅಂಡಾಶಯದ ಕ್ಯಾನ್ಸರ್ ರೋಗ (ಒವೇರಿಯನ್ ಕ್ಯಾನ್ಸರ್).

ಕಾರಣಗಳು: ನಿರ್ದಿಷ್ಟವಾಗಿ ತಿಳಿದಿಲ್ಲ.

ಲಕ್ಷಣಗಳು: ಕ್ರಮಬದ್ಧವಲ್ಲದ ರಕ್ತಸ್ರಾವ, ಮುಟ್ಟು ನಿಂತಾಗ ಕಾಣಿಸಿಕೊಳ್ಳುವ ರಕ್ತಸ್ರಾವ, ರಕ್ತಹೀನತೆ, ಆಯಾಸ, ತೂಕನಷ್ಟ, ಹೊಟ್ಟೆನೋವು, ವಾಸನೆಯಿಂದ ಕೂಡಿದ ಬಿಳಿಬೆರಕೆ ರಕ್ತಸ್ರಾವ, ಕಾಯಿಲೆ ಉಲ್ಬಣಿಸಿದಾಗ ಗೆಡ್ಡೆಗಳು ಕೈಗೆ ಸಿಗುತ್ತವೆ ಮತ್ತು ತತ್ಪರಿಣಾಮವಾದ ರಕ್ತಸ್ರಾವ.

ತಡೆಗಟ್ಟುಕ್ರಮ: ಪ್ರಾರಂಭದಲ್ಲೇ ಕಾಯಿಲೆಯನ್ನು ಗುರುತಿಸಿ ಯುಕ್ತ ಚಿಕಿತ್ಸೆ, ಕ್ರಮಬದ್ಧ ತಪಾಸಣೆ.

ಚಿಕಿತ್ಸೆ: ಕಾಯಿಲೆ ಪ್ರಾರಂಭದಲ್ಲಿದ್ದುದಾದರೆ ಶಸ್ತ್ರಚಿಕಿತ್ಸೆ; ಉಲ್ಬಣಿಸಿದಾಗ ಎಕ್ಸ್‍ಕಿರಣ ಚಿಕಿತ್ಸೆ, ಔಷಧೋಪಚಾರ; ಅತಿಯಾದಾಗ ತಾತ್ಕಾಲಿಕ ಶಮನ ಚಿಕಿತ್ಸೆ.

5. ಮುಟ್ಟು ನಿಲ್ಲುವ ವೇಳೆಯಲ್ಲಿ ಕಂಡುಬರುವ ಕಾಯಿಲೆಗಳು: ಮುಟ್ಟುನಿಲ್ಲುವ ಮತ್ತು ಮುಟ್ಟು ನಿಂತ ತರುವಾಯದ ದಿನಗಳಂದು ಸ್ತ್ರೀಯರಲ್ಲಿ ಕೆಲವು ರೀತಿಯ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಕಾಣಬಹುದು (ಮೆನೊಪಾಸಲ್ ಸಿಂಡ್ರೋಮ್). ಈ ಅವಧಿ ಸಾಧಾರಣ ವಯಸ್ಸು 40ರಿಂದ 50ರ ತನಕ ಇರುತ್ತದೆ.

ಕಾರಣ: ಅಂಡಾಶಯದಿಂದ ಉತ್ಪತ್ತಿಯಾಗುವ ಸ್ತ್ರೀಚೋದಕಗಳ (ಈಸ್ಟ್ರೊಜನ್ಸ್) ಕೊರತೆ.

ಲಕ್ಷಣಗಳು: ಮುಟ್ಟು ನಿಲ್ಲುವಿಕೆ, ಕೀಲುನೋವು, ಮೂಳೆನೋವು, ಬಿಸಿತಾಪಗಳು, ಬೆವರುವಿಕೆ, ಮಾನಸಿಕ ತೊಳಲಾಟ, ಏರಿಳಿತ ಇತ್ಯಾದಿ. ತಡೆಗಟ್ಟುಕ್ರಮ: ಸಕಾಲದಲ್ಲಿ ತಪಾಸಣೆ, ಪರೀಕ್ಷೆ, ಸಮಾಲೋಚನೆ, ಸಲಹೆ, ಹಾರ್ಮೋನಿನ ಚಿಕಿತ್ಸೆ, ಕ್ಯಾಲ್ಸಿಯಮ್ ಮತ್ತು ಶಕ್ತಿವರ್ಧಕಗಳು, ಮನಸ್ಸಿಗೆ ನೆಮ್ಮದಿ ನೀಡುವ ಔಷಧೋಪಚಾರ.

(ಎಲ್.ಕೆ.ವಿ.)