ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಿರಿಯೂರು

ವಿಕಿಸೋರ್ಸ್ದಿಂದ

ಹಿರಿಯೂರು ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಚಿತ್ರದುರ್ಗ ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕನ್ನು ಉತ್ತರದಲ್ಲಿ ಚಳ್ಳಕೆರೆ, ವಾಯವ್ಯದಲ್ಲಿ ಚಿತ್ರದುರ್ಗ, ಪಶ್ಚಿಮದಲ್ಲಿ ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳೂ ದಕ್ಷಿಣದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಪೂರ್ವದಲ್ಲಿ ಶಿರಾ ತಾಲ್ಲೂಕುಗಳೂ ಈಶಾನ್ಯದಲ್ಲಿ ಆಂಧ್ರಪ್ರದೇಶವೂ ಸುತ್ತುವರಿದಿವೆ. ಜವಗೊಂಡನಹಳ್ಳಿ, ಹಿರಿಯೂರು, ಐಮಂಗಲ ಮತ್ತು ಧರ್ಮಪುರ ಹೋಬಳಿಗಳು. ಒಟ್ಟು 157 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 1,703.9 ಚ.ಕಿಮೀ. ಜನಸಂಖ್ಯೆ 2,64,662.

ತಾಲ್ಲೂಕಿನ ಪಶ್ಚಿಮದಲ್ಲಿ ಮಾರಿಕಣಿವೆ ಬೆಟ್ಟಸಾಲುಗಳಿವೆ. ಇವು ಉತ್ತರದ ಕಡೆ ಚಿತ್ರದುರ್ಗದ ವರೆಗೂ ಹಬ್ಬಿವೆ. ಇವುಗಳಲ್ಲಿ ಹೆಚ್ಚು ಎತ್ತರವಿರುವ ಉತ್ತರ ಸಾಲಿನ ಮತ್ತು ಹಿಂದಸಕಟ್ಟೆ ಸಾಲಿನ ಬೆಟ್ಟಗಳು ಮುಖ್ಯವಾದವು. ವೇದಾವತಿ ಈ ತಾಲ್ಲೂಕಿನ ಮುಖ್ಯನದಿ. ತಾಲ್ಲೂಕಿನ ಪಶ್ಚಿಮದಲ್ಲಿ ಪ್ರವೇಶಿಸಿ ತಾಲ್ಲೂಕು ಮಧ್ಯದಲ್ಲಿ ಈಶಾನ್ಯಾಭಿಮುಖವಾಗಿ ಸ್ವಲ್ಪ ದೂರ ಮತ್ತೆ ಪೂರ್ವಾಭಿಮುಖವಾಗಿ, ಅನಂತರ ಉತ್ತರಾ ಭಿಮುಖವಾಗಿ ಹರಿದು ಚಳ್ಳಕೆರೆ ತಾಲ್ಲೂಕನ್ನು ಪ್ರವೇಶಿಸುವುದು. ಈ ನದಿ ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪ ದೂರ ತಾಲ್ಲೂಕಿನ ಎಲ್ಲೆಯಾಗಿ ಹರಿದು ಚಳ್ಳಕೆರೆ ತಾಲ್ಲೂಕನ್ನು ಬೇರ್ಪಡಿಸಿದೆ. ಈ ನದಿಗೆ ಮಾರಿಕಣಿವೆಯ ಬಳಿ ಅಡ್ಡಕಟ್ಟೆ ಕಟ್ಟಿ ವಾಣೀವಿಲಾಸಸಾಗರ ಜಲಾಶಯವನ್ನು ನಿರ್ಮಿಸಲಾಗಿದೆ. ಇದರಿಂದ ಹಿರಿಯೂರು ತಾಲ್ಲೂಕಿನ ವ್ಯವಸಾಯಕ್ಕೆ ಅನುಕೂಲವಾಗಿದೆ. ಗರಣಿಹಳ್ಳ ಮತ್ತು ಸ್ವರ್ಣಮುಖಿ ಈ ತಾಲ್ಲೂಕಿನಲ್ಲಿ ಹರಿದು ವೇದಾವತಿಯನ್ನು ಸೇರುವ ಇನ್ನೆರಡು ಮುಖ್ಯ ನದಿಗಳು. ಉತ್ತಮ ಹವಾಗುಣವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 470.31 ಮಿಮೀ.

ಈ ತಾಲ್ಲೂಕಿನ ಗೋಗುಡ್ಡದ ಬಳಿ ಕಲ್ನಾರು, ಗವನಹಳ್ಳಿ ಬಳಿ ಕ್ಯಾಲ್ಸೈಟ್ ದೊರೆಯುವುದು. ಈ ತಾಲ್ಲೂಕಿನಲ್ಲಿ ಕಬ್ಬಿಣದ ಅದುರು ಸ್ವಲ್ಪಮಟ್ಟಿಗೆ ದೊರೆಯುತ್ತದೆ. ಜವಗೊಂಡನಹಳ್ಳಿ, ಅಣ್ಣಿಸಿದ್ರಿ ಮತ್ತು ದಿಂಡಿವಾರಗಳಲ್ಲಿ ಪ್ರಾಚೀನ ಕಾಲದಲ್ಲಿ ಚಿನ್ನ ತೆಗೆಯುತ್ತಿದ್ದ ಬಗ್ಗೆ ಸೂಚನೆಗಳಿವೆ. ನಿಶಾನಿಗುಡ್ಡದ ಬಳಿ ಸೀಸದ ಅದುರು ಇದೆ. ಮಳೆ ಕಡಿಮೆಯಿರುವ ಪ್ರಯುಕ್ತ ಕುರುಚಲು ಕಾಡುಗಳೇ ಹೆಚ್ಚಾಗಿದ್ದು ಹುಣಿಸೆ, ಮಾವು, ಹಿಪ್ಪೆ, ಜಾಲಿ ಗಿಡಗಳು ಮತ್ತು ಸೀತಾಫಲ ಮುಂತಾದುವು ಬೆಳೆಯುತ್ತವೆ. ಜಿಂಕೆಗಳು ಇತರ ಸಾಮಾನ್ಯ ಕಾಡುಪ್ರಾಣಿಗಳನ್ನು ಈ ಅರಣ್ಯ ಪ್ರದೇಶದಲ್ಲಿ ಕಾಣಬಹುದು. ಕೆರೆ, ಬಾವಿಗಳ ಜೊತೆಗೆ ವಾಣೀವಿಲಾಸಸಾಗರದ ನಾಲೆಗಳಿಂದ ಮತ್ತು ಗಾಯತ್ರಿ ಜಲಾಶಯದಿಂದ ತಾಲ್ಲೂಕಿಗೆ ಸಾಕಷ್ಟು ಜಲಪೂರೈಕೆಯಾಗಿ ಜೋಳ, ರಾಗಿ, ಬತ್ತ, ತೊಗರಿ, ಕಬ್ಬು, ಹತ್ತಿ, ತೈಲಬೀಜಗಳು, ಅಡಕೆ, ವಿವಿಧ ಫಲ ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಹಿರಿಯೂರಿಗೆ 3 ಕಿಮೀ ದೂರದಲ್ಲಿರುವ ಬಬ್ಬೂರು ಕೃಷಿಕ್ಷೇತ್ರ ಕಬ್ಬು, ಹತ್ತಿ ಮತ್ತು ತೋಟದ ಬೆಳೆಗಳ ಸಂಶೋಧನ ಕೇಂದ್ರ. ಇಲ್ಲಿಯ ಪ್ರಯೋಗ-ಫಲಿತಾಂಶಗಳು ಉಪಯುಕ್ತವಾಗಿ ಅದನ್ನು ಮಂಡ್ಯ ಮುಂತಾದ ಕಡೆ ಉಪಯೋಗಿಸಿ ಕೊಂಡು ಫಲ ಪಡೆಯಲಾಗಿದೆ. ಪಶುಪಾಲನೆಯಿದ್ದು ಪಟ್ಟಣ ಮತ್ತು ಗ್ರಾಮ ಮಟ್ಟದ ಪಶುವೈದ್ಯಾಲಯಗಳಿವೆ. ತೊರೆ ನದಿಗಳು ಮತ್ತು ಜಲಾಶಯಗಳಿರುವುದರಿಂದ ಮತ್ಸ್ಯೋದ್ಯಮವೂ ಇದೆ. ಈ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿ ಇತರ ಕೈಗಾರಿಕಾ ಪ್ರಗತಿಗೆ ನಾಂದಿ ಹಾಡಿದೆಯೆನ್ನಬಹುದು. ಕೆಲವೊಂದು ಗ್ರಾಮೋದ್ಯೋಗಗಳ ಸಹಕಾರಿ ಸಂಘಗಳೂ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳೂ ಇವೆ.

ಹಿರಿಯೂರಿಗೆ ಈಶಾನ್ಯದಲ್ಲಿ 26 ಕಿಮೀ ದೂರದಲ್ಲಿರುವ ಅಬ್ಬಿನ ಹೊಳೆ ಒಂದು ಪುರಾತನ ಸ್ಥಳ. ನೊಳಂಬ ದೊರೆ ಅಯ್ಯಪ್ಪನ 923ರ ಶಿಲಾಶಾಸನ ಮತ್ತು ಈ ಊರಿನ ಶಾನುಭೋಗದ ಹಕ್ಕಿಗಾಗಿ ಕಾದ ತುಪ್ಪದಲ್ಲಿ ಕೈ ಇಟ್ಟು ನೆರೆದಿದ್ದ ಸಭೆಗೆ ತೋರಿ ತನ್ನ ಹಕ್ಕನ್ನು ಸ್ಥಾಪಿಸಿದವನ ಪ್ರಸಂಗ ಹೇಳಿರುವ 1664ರ ಶಾಸನ ಇಲ್ಲಿದೆ. ಇಲ್ಲೊಂದು ರಂಗನಾಥ ದೇವಾಲಯವಿದೆ. ಹಿರಿಯೂರು-ಚಿತ್ರದುರ್ಗ ಮಾರ್ಗದಲ್ಲಿರುವ ಐಮಂಗಲ ಹಿರಿಯೂರಿನ ವಾಯವ್ಯಕ್ಕೆ 18 ಕಿಮೀ ದೂರದಲ್ಲಿದೆ. ಈ ಊರಿನ ವೀರಭದ್ರ ದೇವಾಲಯ ಹೆಸರಾದದ್ದು. ಇಲ್ಲಿ ಹಿಂದಿನ ಕೋಟೆಯ ಅವಶೇಷವಿದೆ. ಇದು ಖಾದಿ ಗ್ರಾಮೋದ್ಯೋಗ ಕೇಂದ್ರ. ಹಿರಿಯೂರಿನ ಪಶ್ಚಿಮಕ್ಕೆ 14 ಕಿಮೀ ದೂರದಲ್ಲಿರುವ ಭರಮಗೆರೆಯಲ್ಲಿ ಕಣಿವೆ ಮಾರಮ್ಮನ ಉತ್ಸವಮೂರ್ತಿಯಿದ್ದು ವರ್ಷಕ್ಕೊಮ್ಮೆ ಜಾತ್ರೆಯಾಗುವುದು. ಇದು 17ನೆಯ ಶತಮಾನದ ಪಾಳೆಯಗಾರ ಭರಮಣ್ಣನಾಯಕನ ಹೆಸರಿನಿಂದ ಸ್ಥಾಪಿತವಾದ ಗ್ರಾಮ. ಹಿರಿಯೂರಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಹರ್ತಿಕೋಟೆ ತುಮಕೂರು ಜಿಲ್ಲೆಯ ನಿಡುಗಲ್ಲನ್ನು ಆಳಿದ ವಂಶಸ್ಥರಿಗೆ ಸ್ವಲ್ಪ ಕಾಲ ಮುಖ್ಯ ಕೇಂದ್ರವಾಗಿತ್ತು. ಹಿರಿಯೂರಿಗೆ ನೈಋತ್ಯದಲ್ಲಿ 19ಕಿಮೀ ದೂರದಲ್ಲಿರುವ ವಾಣೀವಿಲಾಸಪುರವೇ ಪ್ರಸಿದ್ಧ ಮಾರಿಕಣಿವೆ ಎಂದು ಕರೆಯುತ್ತಿದ್ದ ಗ್ರಾಮ. ವಾಣೀವಿಲಾಸಸಾಗರಕ್ಕೆ ಈ ಗ್ರಾಮದ ಮುಖಾಂತರ ಹಾದುಹೋಗಬೇಕು.

ಹಿರಿಯೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬೆಂಗಳೂರು-ಚಿತ್ರದುರ್ಗ ಹೆದ್ದಾರಿಯಲ್ಲಿ ಚಿತ್ರದುರ್ಗಕ್ಕೆ ಆಗ್ನೇಯದಲ್ಲಿ 40 ಕಿಮೀ ದೂರದಲ್ಲಿದೆ. ಜನಸಂಖ್ಯೆ 48,772. ವೇದಾವತಿ ನದಿಯ ಬಲದಂಡೆಯ ಮೇಲೆ ಇರುವ ಈ ಪಟ್ಟಣ ಒಂದು ಮುಖ್ಯ ವ್ಯಾಪಾರ ಕೇಂದ್ರ.

ಸು. 16ನೆಯ ಶತಮಾನದಲ್ಲಿ ಮಾಯಾಸಮುದ್ರದ ಕೇಶವನಾಯಕ ನಿಂದ ಸ್ಥಾಪಿತವಾದ ಈ ಊರನ್ನು ಆ ವಂಶದ ಮೂರು ತಲೆಮಾರಿನವರು ಆಳಿದರು. ಆ ಕಾಲದಲ್ಲಿ ನಗರ ತುಂಬ ಅಭಿವೃದ್ಧಿಹೊಂದಿತು. ಅನಂತರ ಇದು ಬಿಜಾಪುರದ ವಶವಾಯಿತು. ಮುಂದೆ ಕೆಲಕಾಲ ಚಿತ್ರದುರ್ಗದ ಪಾಳೆಯಗಾರರ ವಶದಲ್ಲಿದ್ದು 1762ರಲ್ಲಿ ಹೈದರ್ ಅಲಿಯ ಕೈಸೇರಿತು. ಹೈದರ್ ಅಲಿ ಮತ್ತು ಮರಾಠರ ನಡುವಣ ಕದನಗಳ ದೀರ್ಘಾವಧಿ üಯಲ್ಲಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿತು. ದ್ರಾವಿಡ ಶೈಲಿಯ ತೇರುಮಲ್ಲೇಶ್ವರ ಇಲ್ಲಿನ ಮುಖ್ಯ ದೇವಾಲಯ. ಈ ದೇವಾಲಯಕ್ಕೆ ಮೂರು ಪ್ರವೇಶದ್ವಾರಗಳಿದ್ದು ಮಹಾದ್ವಾರದ ಎದುರು ಉಯ್ಯಾಲೆ ಕಂಬವಿದೆ. ಸು. 45† ಎತ್ತರದ ದೀಪಸ್ತಂಭದ ತುದಿಯಲ್ಲಿ ಬಸವನ ವಿಗ್ರಹ ಮತ್ತು ನಾಲ್ಕೂ ದಿಕ್ಕಿನಲ್ಲಿ ಒಂದೊಂದರಲ್ಲೂ ಸುಮಾರು 10 ಸೇರು ಎಣ್ಣೆಯನ್ನು ತುಂಬಬಹುದಾದ ಎರಡೆರಡು ಕಬ್ಬಿಣದ ದೊಡ್ಡ ಸೊಡರುಗಳಿವೆ. ಇವುಗಳನ್ನು ವರ್ಷಕ್ಕೊಮ್ಮೆ ಹಚ್ಚಲಾಗುತ್ತದೆ. ನವರಂಗದಲ್ಲಿ ಶಿವಪಾರ್ವತಿಯರ ವಿಗ್ರಹಗಳೂ ನಂದಿಯ ಮೇಲೆ ಕುಳಿತ ಉಮಾಮಹೇಶ್ವರರ ವಿಗ್ರಹಗಳೂ ಇವೆ. ಪ್ರತಿವರ್ಷ ಮಾಘಮಾಸದಲ್ಲಿ ರಥೋತ್ಸವ ನಡೆಯುವುದು.

ಅಂಬಿಕಾವಿಜಯ ಮತ್ತು ಪರಶುರಾಮ ರಾಮಾಯಣಗಳನ್ನು ಬರೆದ ಕನ್ನಡ ಕವಿ ಬಬ್ಬೂರು ರಂಗನಜನ್ಮಸ್ಥಳ ಹಿರಿಯೂರು ಎಂದು ಹೇಳಲಾಗಿದೆ. ದಂಡಿಯ ಸಂಸ್ಕøತ ಕಾವ್ಯಾದರ್ಶವನ್ನು ಕನ್ನಡಿಸಿದ ಮಾಧವಕವಿ ತಾನು ಹಿರಿಯೂರು ಪ್ರಭು ಎಂದು ಹೇಳಿಕೊಂಡಿದ್ದರೂ ಆ ಹಿರಿಯೂರು ಇದೇ ಹಿರಿಯೂರೇ ಎಂಬುದು ನಿಶ್ಚಿತವಾಗಿಲ್ಲ.

(ಆರ್.ಸಿ.ಜಿ.; ಎಚ್.ಜಿ.)