ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಿಲ್, ಆಕಿಬಾಲ್ಡ್‌ ವಿವಿಯನ್

ವಿಕಿಸೋರ್ಸ್ದಿಂದ

ಹಿಲ್, ಆಕಿಬಾಲ್ಡ್ ವಿವಿಯನ್ (1886-1977). ಸ್ನಾಯುಗಳಲ್ಲಿ ಉಷ್ಣ ಉತ್ಪತ್ತಿಯಾಗುವ ಬಗ್ಗೆ ನಡೆಸಿದ ಸಂಶೋಧನೆಗಾಗಿ ಜರ್ಮನ್ ಅಮೇರಿಕನ್ ಲೆಟ್ಟೋ ಮೇಯರ್ಹಫ್ (1884-1951) ಜೊತೆ 1922ರಲ್ಲಿ ದೇಹವಿಜ್ಞಾನ-ವೈದ್ಯವಿಜ್ಞಾನ ನೊಬೆಲ್ ಪಾರಿತೋಷಕ ಪಡೆದ ಬ್ರಿಟಿಷ್ ವಿಜ್ಞಾನಿ.

1911-14 ಅವಧಿಯಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸ್ನಾಯು ಮತ್ತು ನರಕೋಶಗಳ ಉಷ್ಣ ಸಂಬಂಧಿತ ಕ್ರಿಯೆಗಳ ಬಗ್ಗೆ ಹಿಲ್ ಅಧ್ಯಯಿಸಿದ. ಕಪ್ಪೆಯ ಸ್ನಾಯು ಸಂಕುಚಿಸುವಾಗ ಆಕ್ಸಿಜನ್ ಅಗತ್ಯವಿಲ್ಲವಾದರೂ ಸ್ನಾಯು ಪುನಃ ತನ್ನ ಸಾಮಾನ್ಯ ಸ್ಥಿತಿಗೆ ಹಿಮ್ಮರಳಲು ಆಕ್ಸಿಜನ್ ಬೇಕು ಎಂಬುದು ಇವನ ಆವಿಷ್ಕಾರ. ಸ್ನಾಯು ಚಲನೆಗಳಲ್ಲಿ ಉಂಟಾಗುವ ಅನೇಕ ಜೀವರಾಸಾಯನಿಕ ಕ್ರಿಯೆಗಳ ತಿಳಿವಳಿಕೆಗೆ ಇದು ನಾಂದಿಯಾಯಿತು. ಇವನ ಪ್ರಕಾರ ಆಕ್ಸಿಜನ್ ಇಲ್ಲದಾಗ ಕಾರ್ಬೊಹೈಡ್ರೇಟ್ ಅಣುಗಳು ಒಡೆಯುವುದೇ ಸ್ನಾಯು ಬಲದ ಮೂಲ. ಹೀಮೊಗ್ಲಾಬಿನ್ ಅಣುಗಳು ಆಕ್ಸಿಜನ್ ಪಡೆಯುವುದನ್ನು ಆತ ರೂಪಿಸಿದ ಹಿಲ್ ಸಮೀಕರಣ ವ್ಯಕ್ತಪಡಿಸುತ್ತದೆ.

ಮೊದಲ ಮಹಾಯುದ್ಧ ಕಾಲದಲ್ಲಿ ವಿಮಾನ ವಿರೋಧಿ ಅಸ್ತ್ರಗಳನ್ನು ಸುಧಾರಿಸುವ ಕಾಯಕದಲ್ಲಿ ತೊಡಗಿದ್ದ ಹಿಲ್ ಯುದ್ದಾನಂತರ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ (1920-23), ಲಂಡನಿನ ಯುನಿವರ್ಸಿಟಿ ಕಾಲೇಜು (1923-28) ಮತ್ತು ರಾಯಲ್ ಸೊಸೈಟಿ (1928-51)ಗಳಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾಗಿ (1940-45) ಜರ್ಮನಿಯ ನಾಜಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ.

ಹಿಲ್ ಬರೆದ ಪುಸ್ತಕಗಳಲ್ಲಿ ಸ್ನಾಯು ಚಟುವಟಿಕೆ (ಮಸ್ಕ್ಯುಲರ್ ಆಕ್ಟಿವಿಟಿ), ಮನುಷ್ಯನಲ್ಲಿ ಸ್ನಾಯು ಸಂಚಲನೆ (ಮಸ್ಕ್ಯುಲರ್ ಮೂವ್‍ಮೆಂಟ್ ಇನ್ ಮ್ಯಾನ್) ಹಾಗೂ ಜೀವಂತ ಯಂತ್ರಕೂಟ (ಲಿವಿಂಗ್ ಮಷಿನರಿ) ಮುಖ್ಯವಾದುವು.

 *