ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೀಲಿಯಮ್

ವಿಕಿಸೋರ್ಸ್ದಿಂದ

ಹೀಲಿಯಮ್ ಆವರ್ತಕೋಷ್ಟಕದ 0 ಗುಂಪಿನ 1ನೆಯ ಆವರ್ತದ ಜಡಾನಿಲ ಅಥವಾ ವಿರಳಾನಿಲ ಅಥವಾ ಶ್ರೇಷ್ಠ ಅನಿಲ ಧಾತು. ಪ್ರತೀಕ He. ಪರಮಾಣು ಸಂಖ್ಯೆ 2. ಪರಮಾಣು ತೂಕ 4.003. ದ್ರವನಬಿಂದು: 26 ಅಟ್ಮಾಸ್ಫಿಯರ್ ಸಂಮರ್ದದಲ್ಲಿ -272.050 ಸೆ ಕುದಿಬಿಂದು, -268.790 ಸೆ ಸಾಪೇಕ್ಷ ಸಾಂದ್ರತೆ, 0.166. ಎಲೆಕ್ಟ್ರಾನ್ ವಿನ್ಯಾಸ 1s2. 2 ಸ್ಥಿರ (3He, 4He) ಮತ್ತು 4 ಅತಿ ಬೇಗನೆ ಕ್ಷಯಿಸುವ ವಿಕಿರಣಪಟು ಸಮಸ್ಥಾನಿಗಳಿವೆ. ಅತ್ಯಂತ ಹಗುರದ 2ನೆಯ ಧಾತು.

ಸೂರ್ಯಗ್ರಹಣ ಸಮಯದ ವರ್ಣಗೋಳ ರೋಹಿತದಲ್ಲಿ ಹೀಲಿಯಮ್ ಸೂಚಕ ಉಜ್ಜ್ವಲ ಹಳದಿ ರೇಖೆಯನ್ನು ಫ್ರೆಂಚ್ ಖಗೋಳವಿಜ್ಞಾನಿ ಪಿಯರಿ ಜೂಲಿಸ್ ಸೀಸರ್ ಝ್ಹಾನ್‍ಸೆನ್ (1824-1907) ಆವಿಷ್ಕರಿಸಿದರೂ (1868) ಅದು ಸೋಡಿಯಮ್ ಧಾತುವಿಗೆ ಸಂಬಂಧಿಸಿದ್ದು ಎಂದು ಭಾವಿಸಿ ನಿರ್ಲಕ್ಷಿಸಿದ. ಅದೇ ವರ್ಷ ಬ್ರಿಟಿಷ್ ಖಗೋಳವಿಜ್ಞಾನಿ ಜೋಸೆಫ್ ನಾರ್ಮನ್ ಲಾಕ್ಯೆರ್ (1836-1920) ಸೌರ ರೋಹಿತದಲ್ಲಿ ಸೋಡಿಯಮ್‍ನ ಆ1 ಮತ್ತು ಆ2 ರೇಖೆಗಳೊಂದಿಗೆ ಹೊಂದಾಣಿಕೆ ಆಗದ ಇನ್ನೊಂದು ಹಳದಿ ರೇಖೆ ಇರುವುದನ್ನು ಗಮನಿಸಿದ. ಅಜ್ಞಾತ ಸೌರಧಾತುವಿಗೆ ಅದು ಸಂಬಂಧಿಸಿದ್ದೆಂದು ತರ್ಕಿಸಿ ಆ3 ಎಂದು ಹೆಸರಿಸಿದ. ಬ್ರಿಟಿಷ್ ರಸಾಯನವಿಜ್ಞಾನಿ ಎಡ್ವರ್ಡ್ ಫ್ರ್ಯಾಂಕ್‍ಲ್ಯಾಂಡ್ (1825-99) ಮತ್ತು ಲಾಕ್ಯೆರ್ ಅಜ್ಞಾತ ಧಾತುವಿಗೆ ಹೀಲಿಯಮ್ (ಗ್ರೀಕ್, ಹೀಲಿಯೋಸ್: ಸೂರ್ಯ) ಎಂದು ನಾಮಕರಣ ಮಾಡಿದರು. ಸ್ಕಾಟಿಷ್ ರಸಾಯನವಿಜ್ಞಾನಿ ವಿಲಿಯಮ್ ರ್ಯಾಮ್‍ಸೇ (1852-1916) ಯುರೇನಿಯಮ್ ಅದುರು ಕ್ಲೀವೈಟನ್ನು ಕಾಸಿ ಹೀಲಿಯಮ್ ಅನಿಲ ಪಡೆದು (1895) ಭೂಮಿಯಲ್ಲಿಯೂ ಅದು ಲಭ್ಯ ಎಂದು ಸಿದ್ಧಪಡಿಸಿದ. ಹೀಲಿಯಮ್ ವಿಕಿರಣಪಟು ಪದಾರ್ಥಗಳ ಸ್ವಾಭಾವಿಕ ವಿಘಟನೆಯ ಉತ್ಪನ್ನ ಎಂದು ಬ್ರಿಟಿಷ್ ರಸಾಯನವಿಜ್ಞಾನಿ ಫ್ರೆಡ್ರಿಕ್ ಸಾಡಿ (1877-1956) ಮತ್ತು ರ್ಯಾಮ್‍ಸೇ ಸಿದ್ಧಪಡಿಸಿದರು (1903). ಹೀಲಿಯಮ್ ಪರಮಾಣುವಿನ ನ್ಯೂಕ್ಲಿಯಸ್‍ಗಳೇ ಚಿ-ಕಣಗಳು ಎಂದು ಬ್ರಿಟಿಷ್ ಭೌತವಿಜ್ಞಾನಿ ಅರ್ನೆಸ್ಟ್ ರುದರ್‍ಫರ್ಡ್ (1871-1937) ತೋರಿಸಿದ (1907).

ವಿಶ್ವದ ರಾಶಿಯ ಶೇಕಡಾ 23 ಭಾಗ ಹೀಲಿಯಮ್. ಎಂದೇ, ಪ್ರಮುಖ ವಿಶ್ವದ್ರವ್ಯಗಳ ಸಾಲಿನಲ್ಲಿ ಇದಕ್ಕೆ ದ್ವಿತೀಯ ಸ್ಥಾನ. ಆದರೂ ಭೂಮಿಯಲ್ಲಿ ವಿರಳ ಲಭ್ಯ. ವಿಕಿರಣಪಟು ಕ್ಷಯದ ಉಪೋತ್ಪನ್ನವಾಗಿ ದ್ದರೂ ವಾಯುಗೋಳದಲ್ಲಿ ಸಂಚಯಿಸುವುದಿಲ್ಲ. ಭೂಗುರುತ್ವ ಇದನ್ನು ಹಿಡಿದಿಡಲು ಅಸಮರ್ಥವಾಗಿರುವುದು ಇದಕ್ಕೆ ಕಾರಣ. ಭೂವಾಯು ಗೋಳದ ಶೇಕಡಾ 0.0005ರಷ್ಟಿರುವ ಈ ಅನಿಲ ವಿಕಿರಣಪಟು ಖನಿಜ, ಉಲ್ಕಾ ಕಬ್ಬಿಣ ಮತ್ತು ಖನಿಜ ಚಿಲುಮೆಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿದೆ. ಯುನೈಟೆಡ್ ಸ್ಟೇಟ್ಸ್‍ನಲ್ಲಿ ದೊರೆಯುವ ನೈಸರ್ಗಿಕ ಅನಿಲದಲ್ಲಿ ಸಾಪೇಕ್ಷವಾಗಿ ಅಧಿಕ ಪ್ರಮಾಣದಲ್ಲಿ ಲಭ್ಯ (sಸು. 7.6%). ವಾಣಿಜ್ಯ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ಮತ್ತು ವಾಯುವಿ ನಿಂದ ಆಹರಣ.

ಬಣ್ಣ, ವಾಸನೆ ಮತ್ತು ರುಚಿ ಇಲ್ಲದ ಏಕಪರಮಾಣು ಅನಿಲ. ನೀರಿನಲ್ಲಿ ಲೀನಿಸುವುದಿಲ್ಲ. ರಾಸಾಯನಿಕವಾಗಿ ಜಡಾನಿಲವಾಗಿದ್ದರೂ ಹೀಲಿಯಮಿನ ನಿಯಾನ್ ಮತ್ತು ಹೈಡ್ರೊಜನ್ ಸಂಯುಕ್ತಗಳು ಪತ್ತೆಯಾಗಿವೆ. ಪ್ರಸಾಮಾನ್ಯ ವಾಯು ಸಂಮರ್ದದಲ್ಲಿ ತಣಿಸಿ ಘನೀಕರಿಸಲಾಗದ ಏಕೈಕ ಧಾತು.

-270.970 ಸೆ ತಾಪದ ಆಸುಪಾಸಿನಲ್ಲಿ ದ್ರವ ಹೀಲಿಯಮ್ ಅಸಾಮಾನ್ಯ ಗುಣಗಳನ್ನು ತೋರುತ್ತದೆ. ಇದರ ಎರಡು ಸ್ಥಿರ ಸಮಸ್ಥಾನಿಗಳೂ ಅಧಿತರಲಗಳಾಗುತ್ತವೆ (ಸೂಪರ್‍ಫ್ಲೂಯಿಡ್). ಅಳತೆ ಮಾಡಲಾಗದಷ್ಟು ಕಡಿಮೆ ಸ್ನಿಗ್ಧತೆಯ ಈ ದ್ರವ ಗುರುತ್ವಬಲದಿಂದ ಪ್ರಭಾವಿತವಾಗದೆ ಯಾವುದೇ ಮೇಲ್ಮೈಗುಂಟ ತೆಳು ಪೊರೆಯಾಗಿ ಪ್ರವಹಿಸುತ್ತದೆ. ಈ ತಾಪದಲ್ಲಿ 4ಊe ಎರಡು ವಿಭಿನ್ನ ತರಲಗಳ (ಊe I, ಊe II) ಲಕ್ಷಣಗಳನ್ನು ತೋರುತ್ತದೆ. 4ಊeನ ಅಧಿತರಲತೆಯನ್ನು ರಷ್ಯನ್ ಭೌತವಿಜ್ಞಾನಿ ಪೀಟರ್ ಲಿಯೊನೈಡೊವಿಚ್ ಕಪಿಟ್ಝ (1894-1984) ಎಂಬಾತನೂ (1938) 3ಊeನದ್ದನ್ನು ಡೇವಿಡ್ ಎಮ್ ಲೀ, ಡೌಗ್ಲಾಸ್ ಡಿ ಒಷೆರಾಫ್ ಮತ್ತು ರಾಬರ್ಟ್ ಸಿ ರಿಚರ್ಡ್‍ಸನ್ ಎಂಬ ಅಮೆರಿಕನ್ ಭೌತವಿಜ್ಞಾನಿಗಳೂ ಆವಿಷ್ಕರಿಸಿದರು.

ಅಲ್ಯೂಮಿನಿಯಮ್ ಮತ್ತು ಮೆಗ್ನೇಸಿಯಮಿನಂಥ ಹಗುರ ಲೋಹಗಳ ಜಡಾನಿಲ ಚಾಪ (ಆರ್ಕ್) ಬೆಸೆತದಲ್ಲಿ; ರಾಕೆಟ್ ನೋದನೆ ಯಲ್ಲಿ ಇಂಧನ ಟ್ಯಾಂಕ್‍ಗಳನ್ನು ಸಂಮರ್ದೀಕರಿಸಲು (ಕಾರಣ: ದ್ರವ ಹೈಡ್ರೊಜನಿನ ತಾಪದಲ್ಲಿಯೂ ಇದು ಅನಿಲ); ಪವನವಿಜ್ಞಾನದಲ್ಲಿ ಹವಾಬೆಲೂನುಗಳಲ್ಲಿ ಉತ್ಥಾಪಕ (ಲಿಫ್ಟಿಂಗ್) ಅನಿಲವಾಗಿ; ಅತಿಶೈತ್ಯ ವಿಜ್ಞಾನದಲ್ಲಿ ಶೈತ್ಯಕಾರಿಯಾಗಿ; ಅಧಿಕ ಸಂಮರ್ದ ಉಸಿರಾಟ ಪರಿಕರ್ಮಗಳಲ್ಲಿ (ಉದಾ: ಸ್ಕೂಬ ಡೈವಿಂಗ್, ಕೇಸನ್ ಕಾರ್ಯ) ಹೀಲಿಯಮ್ ಬಳಕೆ ಉಂಟು. ಹೀಲಿಯಮ್ ವಿಶ್ಲೇಷಣೆಯಿಂದ ಉಲ್ಕಾಪಿಂಡ ಮತ್ತು ಶಿಲೆಗಳ ವಯಸ್ಸು ನಿರ್ಧರಿಸುವುದೂ ಉಂಟು. (ಎಚ್.ಜಿ.ಎಸ್.)