ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಮಾಯೂನ್

ವಿಕಿಸೋರ್ಸ್ದಿಂದ

ಹುಮಾಯೂನ್ ಮೊಗಲ್ ವಂಶ ಸ್ಥಾಪಕ ಬಾಬರನ ಮಗ. ಬಾಬರ್ 1530ರಲ್ಲಿ ಮರಣ ಹೊಂದಿದ ಮೇಲೆ ಇವನು ತನ್ನ ಇಪ್ಪತ್ತಮೂರನೆಯ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದ. ಇವನು ಪಾಣಿಪತ್ ಮತ್ತು ಕಣ್ವ ಯುದ್ಧದಲ್ಲಿ ಭಾಗವಹಿಸಿದ್ದ. ಬಾಬರನ ಆಳಿಕೆಯಲ್ಲಿ ಬಡಕ್‍ಶಾನ್‍ನ ರಾಜ್ಯಪಾಲನಾಗಿ ಸೇವೆಸಲ್ಲಿಸಿದ್ದ. ತಂದೆಯ ಬುದ್ಧಿವಾದದಂತೆ ತನ್ನ ತಮ್ಮಂದಿರನ್ನು ಪ್ರೀತಿಯಿಂದ ಕಂಡು ಅವರಿಗೆ ಸೂಕ್ತಸ್ಥಾನಗಳನ್ನುಕೊಟ್ಟ. ಕಮ್ರಾನ್‍ನನ್ನು. ಕಾಬೂಲಿನ ರಾಜ್ಯಪಾಲನಾಗಿ, ಅಸ್ಕರಿಯನ್ನು ಸಂಭಾಲಿನ ರಾಜ್ಯಪಾಲನಾಗಿ, ಹಿಂಡಾಲನನ್ನು ಮೇವಾರದ ರಾಜ್ಯಪಾಲನನ್ನಾಗಿ ಮಾಡಿದ. ಆದರೆ ಇವನು ಪ್ರಾರಂಭದಿಂದಲೂ ತೊಂದರೆಗಳನ್ನು ಎದುರಿಸಬೇಕಾಯಿತು. ಇವನ ಸಹೋದರರೂ ರಕ್ತ ಸಂಬಂಧಿಗಳೂ ಇವನ ವಿರುದ್ಧ ದಂಗೆಯೆದ್ದರು. ಸೋದರನಾದ ಕಮ್ರಾನ್ ಪಂಜಾಬನ್ನು ತನ್ನ ವಶಕ್ಕೆ ತೆಗೆದುಕೊಂಡ. ಇದರಿಂದ ಫಲವತ್ತಾದ ಭಾಗ ಕಳೆದು ಹೋದುದಲ್ಲದೆ, ಪಂಜಾಬ್, ಕಾಬೂಲ್, ಕಂದಹಾರ್‍ಗಳಿಂದ ಒಳ್ಳೆಯ ಸೈನಿಕರನ್ನೂ ಅಧಿಕಾರಿಗಳನ್ನೂ ನೇಮಿಸಿಕೊಳ್ಳುವ ಅವಕಾಶ ತಪ್ಪಿದಂತಾಯಿತು. ಗುಜರಾತಿನ ಬಹಾದೂರ್ ಷಾ ಮತ್ತು ಚುನಾರ್‍ನ ಶೇರ್‍ಖಾನ್ ಹುಮಾಯೂನನ ಪರಮ ಶತ್ರುಗಳಾಗಿದ್ದರು. 1531ರಲ್ಲಿ ಹುಮಾಯೂನ್ ಕಾಲಿಂಜರ್ ಮೇಲೆ ದಾಳಿ ನಡೆಸಿದರೂ ಅಲ್ಲಿ ಆಳುತ್ತಿದ್ದ ಪ್ರತಾಪರುದ್ರದೇವನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಹಿಂದಿರುಗಿದ. ಮುಂದಿನ ವರ್ಷ ದೌರಾ ಕದನದಲ್ಲಿ ಮಹಮದ್ ಲೋಲಿಯನ್ನು ಸೋಲಿಸಿದ. ಅನಂತರ ಬಲಿಷ್ಠನಾದ ಬಹಾದೂರ್‍ಷಾನ ಮೇಲೆ ಯುದ್ಧಕ್ಕೆ ಹೋದ. ಬಹಾದೂರ್‍ಷಾ ಪಲಾಯನಗೈದು ಡಯುಗೆ ಹೋಗಿ ಆಶ್ರಯ ಪಡೆದ.

ಇದೇ ಸಮಯದಲ್ಲಿ ಶೇರ್‍ಖಾನ್ ಸೈನ್ಯವನ್ನು ಸಂಘಟಿಸಿ ಬಿಹಾರದಲ್ಲಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಬಂಗಾಲದ ಮೇಲೆ ನುಗ್ಗಿದ. ಗೌರ್ ಅನ್ನು ವಶಪಡಿಸಿಕೊಂಡ. 1539ರಲ್ಲಿ ಚೌಸದಲ್ಲಿ ನಡೆದ ಯುದ್ಧದಲ್ಲಿ ಈತ ಹುಮಾಯೂನನನ್ನು ಸೋಲಿಸಿದ. 1540ರಲ್ಲಿ ಕನೂಜ್ ಯುದ್ಧದಲ್ಲಿ ಹುಮಾಯೂನ್ ಸಂಪೂರ್ಣವಾಗಿ ಸೋತು ಪಲಾಯನ ಮಾಡಿದ. ಆಶ್ರಯವನ್ನು ಅರಸುತ್ತಾಊರಿಂದ ಊರಿಗೆ ಸುತ್ತುತ್ತಾ, 1542ರಲ್ಲಿ ಅಮರಕೋಟೆಗೆ ಬಂದು ನಿಂತಾಗ ಅಕ್ಬರ್‍ನ ಜನನವಾಯಿತು.

ಶೇರ್‍ಖಾನ್ ಒಳ್ಳೆಯ ಯೋಧನಾಗಿದ್ದ; ಅವನ ರಣಕೌಶಲವೂ ಶ್ರೇಷ್ಠಮಟ್ಟದ್ದಾಗಿತ್ತು. ಹದಿನೈದು ವರ್ಷಗಳಕಾಲ ಅವನು ಹಲವಾರು ರಾಜ್ಯಗಳಿಗೆ ಭೇಟಿನೀಡಿದ. ಅವನ ಸೋದರರಾಗಲೀ ಸಂಬಂಧಿಗಳಾಗಲೀ ಅವನಿಗೆ ನೆರವು ನೀಡಲಿಲ್ಲ. ಕಡೆಗೆ ಪರ್ಷಿಮ್ ಷಾ ತಹಮಸ್ದನು ಹುಮಾಯೂನನಿಗೆ ಕೆಲವು ಷರತ್ತುಗಳ ಮೇಲೆ ಸಹಾಯ ಮಾಡಲು ಮುಂದೆ ಬಂದ. ಪರ್ಷಿಯದ ಸೈನ್ಯದ ಸಹಾಯದಿಂದ ಹುಮಾಯೂನ್ ತನ್ನ ತಮ್ಮ ಅಸ್ಕರಿಯಿಂದ ಕಂದಹಾರನ್ನು ಕಸಿದುಕೊಂಡ. ಎರಡು ವರ್ಷಗಳ ಅನಂತರ ಕಮ್ರಾನ್‍ನಿಂದ ಕಾಬೂಲನ್ನು ಕಸಿದುಕೊಂಡ.

ಈ ಮಧ್ಯೆ ಭಾರತದ ರಾಜಕೀಯ ಪರಿಸ್ಥಿತಿ ಬದಲಾಗಿತ್ತು. ಶೇರ್‍ಷಾ 1545ರಲ್ಲಿ ಗತಿಸಿದ್ದು ರಾಜ್ಯದಲ್ಲಿ ಅರಾಜಕತೆ ಉಂಟಾಗಿತ್ತು. ಅವನ ಉತ್ತರಾಧಿಕಾರಿಗಳು ದುರ್ಬಲರಾಗಿದ್ದು, ಅಂತಃಕಲಹಗಳಲ್ಲಿ ತೊಡಗಿದ್ದರು. ಹುಮಾಯೂನ್ ಹದಿನೈದು ವರ್ಷಗಳ ಅಲೆದಾಟವಾದ ಮೇಲೆ ಪ್ರಬಲವಾದ ದಾಳಿನಡೆಸಿ ದೆಹಲಿ, ಆಗ್ರಗಳನ್ನು ವಶಪಡಿಸಿಕೊಂಡು ತನ್ನ ರಾಜ್ಯವನ್ನು ಮರಳಿ ಪಡೆದ. ಆದರೆ ಇವನು ಬಹುಕಾಲ ಉಳಿಯಲಿಲ್ಲ. 1556ರಲ್ಲಿ ದೆಹಲಿಯಲ್ಲಿದ್ದ ತನ್ನ ಗ್ರಂಥಾಲಯದ ಮಹಡಿ ಮೆಟ್ಟಿಲುಗಳಿಂದ ಬಿದ್ದು ಮೃತಪಟ್ಟ.

ಜೀವನದುದ್ದಕ್ಕೂ ತೊಂದರೆಗಳ ಸರಮಾಲೆಯನ್ನೇ ಎದುರಿಸಿ ಹೋರಾಡಿದ ಇವನಲ್ಲಿ ಅನೇಕ ದೌರ್ಬಲ್ಯಗಳು ಮನೆಮಾಡಿದ್ದವು. ಅಫೀಮು ಸೇವನೆಯಿಂದ ಇವನ ದೈಹಿಕ, ಮಾನಸಿಕ ಸ್ಥಿರತೆ ಕ್ಷೀಣಿಸಿದ್ದವು. ಶತ್ರುಗಳನ್ನು ನಾಶಪಡಿಸಲು ಇವನು ದೃಢ ನಿರ್ಧಾರ ತೆಗೆದುಕೊಳ್ಳದೇ ಹೋದುದರಿಂದ ಅವರು ತಪ್ಪಿಸಿ ಕೊಂಡು ಹೋಗಿ ಹೆಚ್ಚು ಆತಂಕವನ್ನುಂಟುಮಾಡಿದರು. ಶೇರ್‍ಖಾನ್ ಸೈನಿಕರ ಕಷ್ಟ ಸುಖ ತಿಳಿದಿದ್ದು ಅವರ ವಿಶ್ವಾಸವನ್ನು ಗಳಿಸಿದ್ದ ಹುಮಾಯೂನನು ದುರಭ್ಯಾಸಗಳಿಗೆ ತುತ್ತಾಗಿ ಸೈನ್ಯವನ್ನು ಸರಿಯಾಗಿ ನಿಯಂತ್ರಿಸುವಲ್ಲಿ ವಿಫಲನಾದ. ಸೈನ್ಯದ ಕಾರ್ಯಾಚರಣೆಯಲ್ಲೂ ವ್ಯೂಹರಚನೆಯಲ್ಲೂ ಇವನು ಪದೇ ಪದೇ ಸೋತ. ಶೇರ್‍ಖಾನ್ ಪ್ರಬಲನಾಗಲು ಬಿಟ್ಟದ್ದು ಇವನ ಮಹಾಪರಾಧ. ಇದರಿಂದ ಇವನು ತನ್ನ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ಇವನ ಶತ್ರುಗಳು ಇವನಷ್ಟು ಪ್ರಬಲರಾಗಿಲ್ಲದಿದ್ದರೂ, ನಿರ್ಲಕ್ಷ್ಯ, ಸಮರ್ಥ ನಾಯಕತ್ವದ ಅಭಾವದಿಂದ ಹುಮಾಯೂನ್ ಸೋಲನ್ನನುಭವಿಸಿದ. ಸ್ವಾರ್ಥಿಗಳೂ ದ್ರೋಹಿಗಳೂ ಆಗಿದ್ದ ಇವನ ಸೋದರ ಸಂಬಂಧಿಗಳೂ ಕಷ್ಟಕಾಲದಲ್ಲಿ ಇವನಿಗೆ ಸಹಾಯಮಾಡಲಿಲ್ಲ. ಬದಲಾಗಿ ಇವನಿಗೆ ಕಿರುಕುಳ ಕೊಡುತ್ತಾ ಹೋದರು. ಇವನಲ್ಲಿ ಅನೇಕ ಉತ್ತಮ ಗುಣಗಳಿದ್ದವು. ಈತ ಉತ್ತಮ ಯೋಧನಾಗಿದ್ದ. ಯುದ್ಧಗಳಲ್ಲಿ ಭಾಗವಹಿಸಿ ಅಪಾರವಾದ ಅನುಭವವನ್ನು ಸಂಪಾದಿಸಿದ್ದ. ಗಣಿತ, ಜ್ಯೋತಿಷ್ಯಶಾಸ್ತ್ರ ಮುಂತಾದುವುಗಳಲ್ಲಿ ಪಾಂಡಿತ್ಯ ಪಡೆದಿದ್ದ. ಕಾವ್ಯರಚನೆಯಲ್ಲೂ ಇವನಿಗೆ ಪರಿಶ್ರಮವಿತು. ಅಕ್ಬರನಂತೆ ಇವನೂ ವಿದ್ವಾಂಸರನ್ನು ಪೋಷಿಸುತ್ತಿದ್ದ, ಅವರೊಡನೆ ಆಸಕ್ತಿಯಿಂದ ಚರ್ಚಿಸುತ್ತಿದ್ದ. ಅಪರಿಮಿತ ಔದಾರ್ಯ, ರಸಿಕತೆ, ಮನಸ್ಥೈರ್ಯ, ದಯೆ, ವಿದ್ವಜ್ಜನಪ್ರೇಮ ಇವನ ಸದ್ಗುಣಗಳಾಗಿದ್ದುವು. ಸುಸಂಸ್ಕøತ ಮತ್ತು ಸಂಭಾವಿತ ವ್ಯಕ್ತಿಯಾಗಿದ್ದ ಈತ ಇತಿಹಾಸಕಾರರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

(ಎಸ್.ಎಮ್.ವಿ.)