ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೈಸನ್ಬರ್ಗ್, ವರ್ನರ್ ಕಾರ್ಲ್

ವಿಕಿಸೋರ್ಸ್ದಿಂದ

ಹೈಸನ್‍ಬರ್ಗ್, ವರ್ನರ್ ಕಾರ್ಲ್ 1901-76. ಜರ್ಮನಿಯ ಒಬ್ಬ ಶ್ರೇಷ್ಠ ಸೈದ್ಧಾಂತಿಕ ಭೌತವಿಜ್ಞಾನಿ, ತತ್ತ್ವಜ್ಞಾನಿ. ಹೈಸನ್‍ಬರ್ಗ್ ಮೂನಿಕ್ ವಿಶ್ವವಿದ್ಯಾಲಯದಲ್ಲಿ ಆರ್ನಾಲ್ಡ್ ಜೊಹಾನ್ನೆಸ್ ವಿಲ್‍ಹೆಲ್ಮ್ ಸಾಮರ್‍ಫೆಲ್ಡ್ (1868-1951) ಕೈ ಕೆಳಗೆ ಅಧ್ಯಯಿಸಿ ಡಾಕ್ಟರೇಟ್ ಪದವಿ ಪಡೆದ (1923). 1924ರ ಮಾಗಿಯಲ್ಲಿ ಕೋಪನ್‍ಹೇಗನ್ನಿನಲ್ಲಿ ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ (1885-1962) ಜೊತೆ ಕೆಲಸ ಮಾಡಿದ. 26ನೆಯ ವಯಸ್ಸಿನಲ್ಲಿ ಲಿಪ್ಸನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ ಹೈಸನ್‍ಬರ್ಗ್ ತದನಂತರ ಬರ್ಲಿನ್ ವಿಶ್ವವಿದ್ಯಾಲಯ ಸೇರಿದ(1941). ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಅಮೆರಿಕ ದೇಶದ ಸೈನಿಕರು ಅವನನ್ನೂ ಅವನ ಸಹವರ್ತಿಗಳನ್ನೂ ಸೆರೆಹಿಡಿದು ಇಂಗ್ಲೆಂಡಿನಲ್ಲಿ ಇಟ್ಟರು. ಯುದ್ಧಾನಂತರ ಜರ್ಮನಿಗೆ ಹಿಂದಿರುಗಿ (1946) ಗಾಂಟಿಂಗಿನ್ ಮಾಕ್ಸ್ ಪ್ಲಾಂಕ್ ಭೌತವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾದ.

1925ರ ಜೂನ್ ತಿಂಗಳಲ್ಲಿ ಹೈಸನ್‍ಬರ್ಗ್ ಅಸಂಗತ ಆಂದೋಲಕದ (ಅನ್‍ಹಾರ್ಮೋನಿಕ್ ಆಸಿಲೇಟರ್) ಸ್ಥಾಯೀ ಸ್ಥಿತಿಗಳಿಗೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಭೌತಿಕ ಸಮಸ್ಯೆಯನ್ನು ಬಿಡಿಸಿದ. ಭೌತ ಪ್ರಾಚಲಗಳನ್ನು ಪರಿಗಣಿಸಿ ಅವುಗಳಿಗೆ ಸಂಬಂಧಿಸಿದ ಚಲಪರಿಮಾಣಗಳನ್ನು ವಿನ್ಯಾಸಗಳಲ್ಲಿ ಪ್ರತಿನಿಧಿಸಬೇಕೆಂದು ಅವನು ಸೂಚಿಸಿದ. ಈ ವಿನ್ಯಾಸಗಳು ಮ್ಯಾಟ್ರಿಕ್ಸ್ ಬೀಜಗಣಿತದ ನಿಯಮಗಳನ್ನು ಪಾಲಿಸುತ್ತವೆಂದು ಮ್ಯಾಕ್ಸ್‍ಬಾರ್ನ್ (1882-1970) ತೋರಿಸಿದ. ಬಾರ್ನ್, ಪಾಸ್ಶ್ಯುಅಲ್ ಜೋರ್ಡಾನ್ (1902-80) ಮತ್ತು ಹೈಸನ್‍ಬರ್ಗ್ ಈ ಸಿದ್ಧಾಂತಕ್ಕೆ ಸರಿಯಾದ ರೂಪ ಕೊಟ್ಟರು. ಇದು ಮ್ಯಾಟ್ರಿಕ್ಸ್ ಮೆಕ್ಯಾನಿಕ್ಸ್ ಎಂದು ಹೆಸರು ಪಡೆಯಿತು. ಇಂಥ ಕ್ರಾಂತಿಕಾರಕ ಸೈದ್ಧಾಂತಿಕ ಬೆಳವಣಿಗೆಯನ್ನು ಸಾಧಿಸಿದಾಗ ಹೈಸನ್‍ಬರ್ಗ್ 24 ವರ್ಷಗಳನ್ನೂ ದಾಟಿರಲಿಲ್ಲ.

ಹೈಡ್ರೊಜನ್ ಅಣು ಆರ್ತೊಹೈಡ್ರೊಜನ್ ಮತ್ತು ಪಾರಹೈಡ್ರೊಜನ್ ಎಂಬ ಎರಡು ರೂಪಗಳಲ್ಲಿರಬಹುದೆಂಬುದನ್ನು ಹೈಸನ್‍ಬರ್ಗ್ ಮುನ್ಸೂಚಿಸಿದ.

1927ರಲ್ಲಿ ಹೈಸನ್‍ಬರ್ಗ್ ಅನಿಶ್ಚಿತತಾ ನಿಯಮವನ್ನು ಮಂಡಿಸಿದ. ಶಕ್ತಿ, ಕಾಲ, ಸ್ಥಾನ ಮತ್ತು ಸಂವೇಗಗಳಂಥ ಸಂಬದ್ಧ ಭೌತಪ್ರಾಚಲಗಳ ಅಳತೆಗಳು ಹೇಗೆ ಒಂದನ್ನೊಂದು ಪ್ರಭಾವಿಸುತ್ತವೆ ಎಂಬುದನ್ನು ಇದು ತಿಳಿಸುತ್ತದೆ. ಪ್ರತೀಕಾತ್ಮಕವಾಗಿ ಇದನ್ನು ಎಂದು ಬರೆಯಬಹುದು. ಮತ್ತು ಕ್ರಮವಾಗಿ ಸ್ಥಾನ ಮತ್ತು ಸಂವೇಗದಲ್ಲಿರುವ ಅನಿಶ್ಚಿತತೆಗಳು, h = ಪ್ಲಾಂಕ್ ಸ್ಥಿರಾಂಕ. ಈ ನಿಯಮ ಕ್ವಾಂಟಂ ಮೆಕ್ಯಾನಿಕ್ಸ್‍ನ ಮೂಲೆಗಲ್ಲು. ಅನಿಶ್ಚಿತತಾ ತತ್ತ್ವದ ಮಂಡನೆಯ ಮಹತ್ವಕ್ಕಾಗಿ 1932ರಲ್ಲಿ ಹೈಸನ್‍ಬರ್ಗ್ ನೊಬೆಲ್ ಪ್ರಶಸ್ತಿ ಪಡೆದ.

ಕ್ವಾಂಟಂ ಮೆಕ್ಯಾನಿಕದ ಬೆಳವಣಿಗೆ ಅನೇಕ ಬೇರೆ ಅನ್ವೇಷಕಗಳ ಮಧ್ಯೆ ಜಲಜನಕದ ಅನ್ಯರೂಪತೆಗಳ ನ್ಯೂಟ್ರಾನ್ ಆವಿಷ್ಕಾರದ (1932) ಬಳಿಕ ನ್ಯೂಟ್ರಾನ್-ಪ್ರೋಟಾನುಗಳನ್ನು ಒಳಗೊಂಡ ಪರಮಾಣು ನ್ಯೂಕ್ಲಿಯಸ್ಸಿನ ಸಾಧ್ಯತೆಯನ್ನು ಹೈಸೆನ್‍ಬರ್ಗ್ ಸೂಚಿಸಿದ. ಇಂಗ್ಲೆಂಡಿನ ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾಗಿದ್ದ ಹೈಸನ್‍ಬರ್ಗ್ ಅನೇಕ ದೇಶಗಳ ವಿಜ್ಞಾನ ಸಂಘಗಳ ಗೌರವ ಸದಸ್ಯತ್ವಗಳನ್ನು ಪಡೆದ.

ಅವನ ಗಮನವೆಲ್ಲ ಇದ್ದದ್ದು ಸಂಘಟಿತ ಕ್ಷೇತ್ರ ಸಿದ್ಧಾಂತದ ಕಡೆಗೆ ಈ ದಿಶೆಯಲ್ಲಿ ಅವನು ಒಂದು ಅರೇಬಿ ಸೈನರ್ ಸಮೀಕರಣವನ್ನು ಸ್ಥಾಪಿಸಿದ್ಧ. ಅದು ಬಹುಶಕ್ತಿ ಸಂಘಟನೆಗಳಲ್ಲಿ ಹುಟ್ಟುವ ಎಲ್ಲ ಬಗೆಯ ಮೂಲಭೂತ ಕಣಗಳನ್ನೂ ವಿವರಿಸುತ್ತದೆಂದು ಅವನು ನಂಬಿದ್ದ. ನ್ಯೂಕ್ಲಿಯರ್ ಭೌತವಿಜ್ಞಾನ, ಫೆರೊಕಾಂತತ, ವಿಶ್ವಕಿರಣಗಳು ಮತ್ತು ಪ್ಲಾಸ್ಮ ಭೌತವಿಜ್ಞಾನಗಳಿಗೆ ಹೈಸನ್‍ಬರ್ಗ್ ನೀಡಿದ ಕೊಡುಗೆಗಳು ಉಲ್ಲೇಖಾರ್ಹವಾದವು. ಪರಮಾಣುಶಕ್ತಿಯ ಶಾಂತಿಯುತ ಬಳಕೆಗಾಗಿ ಅವನು ಸಾರ್ವಜನಿಕಾಭಿಪ್ರಾಯ ಮೂಡಿಸಲು ಸತತ ಪ್ರಯತ್ನಪಟ್ಟ. ಹೈಸನ್‍ಬರ್ಗ್‍ನ ಕೊನೆಯ ದಿನಗಳಲ್ಲಿ ಪ್ರಾಚೀನ ಸಮಸ್ಯೆ ಏಕ ಮತ್ತು ಅನೇಕ ಅವನನ್ನು ಕಾಡಿತು. ವೀಕ್ಷಕನನ್ನು ಒಳಗೊಳ್ಳದ ಯಾವುದೇ ಸಿದ್ಧಾಂತ ಪೂರ್ಣವಾಗದು ಎಂದು ಅವನು ವಾದಿಸುತ್ತಿದ್ದ. (ಎಸ್.ಎ.ಎಚ್.)