ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೊಂಗೆ

ವಿಕಿಸೋರ್ಸ್ದಿಂದ

ಹೊಂಗೆ ಲೆಗ್ಯುಮಿನೋಸೀ ಕುಟುಂಬದ ಪೊಂಗ್ಯಾಮಿಯ ಪಿನ್ನೇಟ ಪ್ರಭೇದದ ನಿತ್ಯಹಸುರಿನ ಮರ. ಕುಳ್ಳು ಕಾಂಡದ ಇದು ಹರಡಿ ವಿಸ್ತಾರವಾಗಿ ಬೆಳೆಯುವುದು. ಹಳ್ಳ, ನದೀ ದಡಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಕರಾವಳಿ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ. ಒಳನಾಡಿನಲ್ಲಿ ತೋಪುಗಳಲ್ಲಿ ಸಾಲು ಮರಗಳಾಗಿ ಇದನ್ನು ವಿಶೇಷವಾಗಿ ಬೆಳೆಸುತ್ತಾರೆ. ಬರಡು ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಲ್ಲಲ್ಲಿ ತೋಪುಗಳಲ್ಲಿ ಬೆಳೆಯುವುದುಂಟು. ಬೇಸಿಗೆಯಲ್ಲಿ ಇದರ ನೆರಳು ಬಹುಹಿತ. ಬೀಜಬಿತ್ತಿ ಸುಲಭವಾಗಿ ಬೆಳೆಸಬಹುದು. ಏಪ್ರಿಲ್-ಮೇ ತಿಂಗಳಲ್ಲಿ ಇದರ ನೀಲಿ ಮಿಶ್ರಿತ ಬಿಳಿಯ ಹೂಗೊಂಚಲು ಮೂಡಿ, ಮುಂದಿನ ಮಾರ್ಚ್-ಮೇ ತಿಂಗಳಲ್ಲಿ ಕಾಯಿಗಳು ಮಾಗುತ್ತವೆ.

ಇದರ ಹೂಗಳು, ಎಲೆಗಳು ಉತ್ಕøಷ್ಟವಾದ ಹಸಿರು ಗೊಬ್ಬರವನ್ನು ಒದಗಿಸುತ್ತದೆ. ಹೊಂಗೆ ಹಿಂಡಿಕೂಡ ಒಳ್ಳೆಯ ಗೊಬ್ಬರ. ಬೀಜದಿಂದ ಹೊಂಗೆ ಎಣ್ಣೆ ಬರುತ್ತದೆ. ಎಣ್ಣೆಯನ್ನು ಡೀಸೆಲ್‍ಗೆ ಪರ್ಯಾಯವಾಗಿ ವಾಹನ ಇಂಧನವಾಗಿ ಬಳಸಬಹುದೆಂಬ ಕಾರಣದಿಂದ ಮರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಚೌಬೀನೆ ಹಳದಿಮಿಶ್ರಿತ ಬಿಳಿಯಬಣ್ಣ. ಬಾಳಿಕೆ ಬರುವುದಿಲ್ಲ. ಸೌದೆಗಾಗಿ ಉಪಯೋಗಿಸುವುದುಂಟು. (ಎ.ಕೆ.ಎಸ್.)