ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೊನ್ನೆ

ವಿಕಿಸೋರ್ಸ್ದಿಂದ

ಹೊನ್ನೆ ಲೆಗ್ಯುಮಿನೋಸೀ ಕುಟುಂಬದ ಟೀರೊಕಾರ್ಪಸ್ ಮಾರ್ಸುಪಿಯಂ ಪ್ರಭೇದದ ಪರ್ಣಪಾತಿ ಮರ. ಹರಡಿದ ಕೊಂಬೆಗಳನ್ನೂ ಪಡೆದಿದೆ. ಅನುಕೂಲಕರ ವಾತಾವರಣದಲ್ಲಿ ಕಾಂಡ ನೇರವಾಗಿ ಬೆಳೆದು 30ಮೀ ಎತ್ತರ ಹಾಗೂ 3 ಮೀ ಸುತ್ತಳತೆಯನ್ನು ಪಡೆಯುವುದು. ತೊಗಟೆ ಮಂದ, ಬೂದುಬಣ್ಣ. ಸಣ್ಣ ಅಸಮರೂಪದ ಹೊಪ್ಪಳಿಕೆಗಳು ಕಂಡುಬರುತ್ತವೆ. ಕೆತ್ತಿದಾಗ ಕೆಂಪು ಬಣ್ಣದ ಅಂಟು ರಾಳ ಹೊರಡುತ್ತದೆ.

ಭಾರತದ ಪರ್ಯಾಯದ್ವೀಪ ಭಾಗದ ಪರ್ಣಪಾತಿ ಕಾಡುಗಳ, ತೇವಮಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹಿಮಾಲಯ ತಪ್ಪಲು ಪ್ರದೇಶ, ಮಹಾರಾಷ್ಟ್ರ, ಆಂಧ್ರ, ಒರಿಸ್ಸ ಈ ಪ್ರಾಂತ್ಯಗಳಲ್ಲಿಯೂ ಇದು ಕಂಡುಬರುತ್ತದೆ.

ಏಪ್ರಿಲ್-ಮೇ ತಿಂಗಳುಗಳಲ್ಲಿ ಕೆಲವು ಕಾಲ ಎಲೆ ಇಲ್ಲದಿದ್ದು, ಮೇ-ಜೂನ್‍ನಲ್ಲಿ ಹೊಸ ಚಿಗುರು ಬಂದು, ಜೂನ್-ಆಗಸ್ಟ್ ತಿಂಗಳಲ್ಲಿ ಸುವಾಸಿತ ಹಳದಿಯ ಹೂಗೊಂಚಲುಗಳಿಂದ ಕೂಡಿರುವುವು. ಜನವರಿ-ಮಾರ್ಚಿನಲ್ಲಿ ಕಾಯಿ ಮಾಗುವುದು. 2-5 ಸೆಂಮೀ ವ್ಯಾಸದ ಕಂದುಬಣ್ಣದ ಚಪ್ಪಟೆಯ ರೆಕ್ಕೆಯುಳ್ಳ ಕಾಯಿಗಳು ಮರದಿಂದ ಜೋಲಾಡುತ್ತಿದ್ದು ದೊಡ್ಡಗಾಳಿ ಬಂದಾಗ ದೂರದವರೆಗೆ ಪ್ರಸಾರವಾಗುತ್ತವೆ.

ತಕ್ಕಮಟ್ಟಿಗೆ ಬಿಸಿಲನ್ನು ಅಪೇಕ್ಷಿಸುತ್ತದೆ. ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಸ್ವಾಭಾವಿಕ ಪುನುರುತ್ಪತ್ತಿ ಸಮರ್ಪಕವಾಗಿದ್ದರೂ ಸಸಿಗಳು ದೊಡ್ಡವಾಗಬೇಕಾದರೆ ಜಾನುವಾರು, ಬೆಂಕಿ ಕಾಟದಿಂದ ಕಾಪಾಡಬೇಕು. ಬೇರು ಸಸಿಗಳು ಹೇರಳವಾಗಿರುತ್ತವೆ. ಬೀಜಬಿತ್ತಿ ಸಸಿ ಬೆಳೆಸಬಹುದು.

ಚೌಬೀನೆಯ ಬಿಳಿಮರ ಕೆನೆಬಣ್ಣದ ಬಿಳುಪು; ಕೆಚ್ಚು ಮಾಸಲು ಹಳದಿ ಮಿಶ್ರ ಕಂದು; ಕ್ರಮೇಣ ಕಪ್ಪು ಛಾಯೆಗೆ ತಿರುಗುವುದು. ನೀರು ತಗುಲಿದಲ್ಲಿ ಹಳದಿಯ ಕರೆಕಟ್ಟುವುದು. ಚೆನ್ನಾಗಿ ಹದಗೊಳ್ಳುವುದು. ಒಳಭಾಗ ಕೆಲವು ಬಾರಿ ಕೆಟ್ಟಿರುವುದರಿಂದ ಕೊಯ್ಯುವಾಗ ಬೇರ್ಪಡಿಸಬೇಕು. ಚೌಬೀನೆ ಶಕ್ತಿಯುತ ಹಾಗೂ ಗಡುಸಿನದಾಗಿರುತ್ತದೆ. ಬಾಳಿಕೆಯುಳ್ಳದ್ದು. ಕೊಯ್ತಕ್ಕೂ ಮರಗೆಲಸಗಳಿಗೂ ಸುಲಭ. ಚೆನ್ನಾಗಿ ಹೊಳಪು ಕೊಡಬಹುದು. ಪದರ ಹಲಗೆಗೆ ಉಪಯುಕ್ತ ವಾದರೂ ಉರುಳೆಯಂತ್ರ (ರೋಡರ್) ದಿಂದ ತೆಗೆಯಲು ಕಷ್ಟ ತೆಳುವಾದ ಬಿಲ್ಲೆಯಾಗಿ ಕುಮಂತಿ (ಸ್ಲೈಸ್) ಉಪಯೋಗಿಸಬಹುದು.

ದಕ್ಷಿಣ ಭಾರತದಲ್ಲಿ, ಸಾಗುವಾನಿ, ಬೀಟೆ ಹೊರತು, ಅತಿಬಳಕೆಯಲ್ಲಿರುವ ಚೌಬೀನೆ ಇದಾಗಿದೆ. ಗೃಹನಿರ್ಮಾಣ, ಪೀಠೋಪಕರಣ, ಗಾಡಿಚಕ್ರ, ಗಣಿ ಆನಿಕೆ, ರೈಲ್ವೆ ಕೋಚು, ಸ್ಲೀಪರುಗಳು, ದೋಣಿ ತಯಾರಿಕೆ, ಕೊಳಗಗಳು, ವ್ಯವಸಾಯದ ಉಪಕರಣಗಳು ಹಾಗೂ ಕೆತ್ತನೆ ಕೆಲಸಗಳು ಮುಂತಾದವುಗಳಿಗೆ ಉಪಯುಕ್ತ. ಈ ಮರದ ಅಂಟು (ಕಿನೊ ಗಮ್) ಔಷಧಿಗೆ ಬರುತ್ತದೆ. ತೊಗಟೆಯಿಂದ ಬಣ್ಣ ಬರುತ್ತದೆ. ಎಲೆಗಳು ಜಾನುವಾರುಗಳ ಮೇವಿಗೂ ಗೊಬ್ಬರಕ್ಕೂ ಉಪಯುಕ್ತ ಎನಿಸಿದೆ. (ಎ.ಕೆ.ಎಸ್.)