ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹ್ಯಾಲಿ, ಎಡ್ಮಂಡ್

ವಿಕಿಸೋರ್ಸ್ದಿಂದ

ಹ್ಯಾಲಿ, ಎಡ್ಮಂಡ್ 1656-1742. ಹ್ಯಾಲಿ ಧೂಮಕೇತು ಎಂದು ಇಂದು ಗುರುತಿಸಲಾಗುತ್ತಿರುವ ಧೂಮಕೇತುವನ್ನು ನಿಖರವಾಗಿ ಲೆಕ್ಕಿಸಿದ ಖ್ಯಾತ ಬ್ರಿಟಿಷ್ ಖಗೋಲವಿಜ್ಞಾನಿ.

1656 ನವೆಂಬರ್ 8ರಂದು ಲಂಡನ್ ಸಮೀಪದ ಶೋರ್‍ಡಿಚ್‍ನ ಹ್ಯಾಗರ್‍ಸ್ಟನ್ ಎಂಬಲ್ಲಿ ಸಾಬೂನು ತಯಾರಿಕಾ ಉದ್ಯಮಿ ಕುಟುಂಬದಲ್ಲಿ ಜನನ. ಮನೆಪಾಠ ಮುಖೇನ ಪೂರ್ವಸಿದ್ಧತೆಯೊಂದಿಗೆ ಸೇಂಟ್ ಪಾಲ್ ಶಾಲೆಗೆ ಸೇರ್ಪಡೆ. ಅಭಿಜಾತ ಕೃತಿಗಳು ಮತ್ತು ಗಣಿತಾಧ್ಯಯನದಲ್ಲಿ ಉನ್ನತ ಮಟ್ಟದ ಸಾಧನೆ. 15 ವರ್ಷ ವಯಸ್ಸಿಗೆ ಶಾಲೆಯ ಕ್ಯಾಪ್ಟನ್ ಜವಾಬ್ದಾರಿ ಧಾರಣೆ; ಭೂಕಾಂತ ಕ್ಷೇತ್ರದಿಂದಾಗಿ ದಿಕ್ಸೂಚಿ ಪಠನಗಳಲ್ಲಿ ಆಗುವ ವ್ಯತ್ಯಯನಗಳ ವೀಕ್ಷಣೆ; ನಕ್ಷತ್ರಪಟದಲ್ಲಿ ಇರುವ ದೋಷಗಳನ್ನು ನಿಖರವಾಗಿ ಪತ್ತೆಹಚ್ಚುವಷ್ಟರ ಮಟ್ಟಿಗೆ ಆಕಾಶದಲ್ಲಿ ನಕ್ಷತ್ರವೀಕ್ಷಣೆ - ಇವು ಎಳೆವಯಸ್ಸಿನಲ್ಲಿಯೇ ಗೋಚರಿಸಿದ ಪ್ರತಿಭಾ ಸೂಚಿಗಳು. ಉನ್ನತ ಶಿಕ್ಷಣಕ್ಕಾಗಿ ಆಕ್ಸ್‍ಫರ್ಡ್‍ನ ಕ್ವೀನ್ಸ್ ಕಾಲೇಜಿಗೆ ದಾಖಲಾಗುವ ವೇಳೆಗೆ (1673) ಉತ್ತಮ ಉಪಕರಣಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ತಜ್ಞ ಖಗೋಲವಿಜ್ಞಾನಿ ಎಂಬ ಖ್ಯಾತಿಗೆ ಪಾತ್ರ. ರಾಜ ಖಗೋಲವಿಜ್ಞಾನಿ (ಅಸ್ಟ್ರಾನಮರ್ ರಾಯಲ್) ಜಾನ್ ಫ್ಲ್ಯಾಮ್‍ಸ್ಟೀಡ್ (1646-1719) ಆಕ್ಸ್‍ಫರ್ಡ್ ಮತ್ತು ಗ್ರೀನ್‍ವಿಚ್‍ನಲ್ಲಿ ಮಾಡುತ್ತಿದ್ದ ಖಗೋಲವೀಕ್ಷಣಾ ಕಾರ್ಯದಲ್ಲಿ ಸಹಾಯಕನಾಗಿ ಕಾರ್ಯಾರಂಭ (1675). ಚಂದ್ರನಿಂದ ಕುಜನ ಸಂಕ್ರಮವನ್ನೂ ಒಳಗೊಂಡಂತೆ (1676 ಆಗಸ್ಟ್ 21) ಅನೇಕ ಪ್ರಮುಖ ಖಾಗೋಲಿಕ ವಿದ್ಯಮಾನಗಳನ್ನು ಆಕ್ಸ್‍ಫರ್ಡ್‍ನಲ್ಲಿ ಮಾಡಿದ.

ಹ್ಯಾಲಿ ಔಪಚಾರಿಕ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು (1676) ದಕ್ಷಿಣ ಗೋಲಾರ್ಧದಲ್ಲಿರುವ ಸೇಂಟ್ ಹೆಲೀನಕ್ಕೆ ಪಯಣಸಿದ. ಫ್ಲ್ಯಾಮ್‍ಸ್ಟೀಡ್ ಗ್ರೀನ್‍ವಿಚ್‍ನ ರಾಯಲ್ ವೀಕ್ಷಣಾಲಯದಲ್ಲಿ ಉತ್ತರ ಗೋಲಾರ್ಧದ ನಕ್ಷತ್ರಪಟ ತಯಾರಿ ಕಾರ್ಯನಿರತನಾಗಿದ್ದ. ಹ್ಯಾಲಿ ದಕ್ಷಿಣ ಗೋಲಾರ್ಧದ ನಕ್ಷತ್ರಪಟ ತಯಾರಿಸಲಿಚ್ಛಿಸಿದ್ದೇ ಇದಕ್ಕೆ ಕಾರಣ. ಹ್ಯಾಲಿಯ ಈ ಪ್ರಯತ್ನಕ್ಕೆ ತಂದೆ, ಇಂಗ್ಲೆಂಡಿನ ರಾಜ 2 ನೆಯ ಚಾಲ್ರ್ಸ್, ರಾಯಲ್ ಸೊಸೈಟಿಯ ಅಧ್ಯಕ್ಷ ವಿಲಿಯಮ್ ಬ್ರೌಂಕರ್ (1620-1684) ಮತ್ತು ರಾಯಲ್ ವೀಕ್ಷಣಾಲಯದ ಸ್ಥಾಪಕರ ಪೈಕಿ ಒಬ್ಬನಾದ ಜೋನಾಸ್ ಮೂರ್ (1627-1679) ಇವರ ಬೆಂಬಲವಿತ್ತು.

ಷಷ್ಠಕದ (ಸೆಕ್ಸ್ಟೆಂಟ್) ಸುಧಾರಣೆ, ಸಾಗರ ಮತ್ತು ವಾಯುಮಂಡಲ ಸಂಬಂಧಿತ ಅಮೂಲ್ಯ ತಥ್ಯಗಳ ಸಂಗ್ರಹಣೆ, ಲೋಲಕದ ವಿಷುವೀಯ ಅವಕರ್ಷಣದ (ಈಕ್ವೆಟೋರಿಯಲ್ ರಿಟಾರ್ಡೇಶನ್ ಆಫ್ ದಿ ಪೆಂಡುಲಮ್) ನಿಖರ ದಾಖಲೆ ಇವು ಸೇಂಟ್ ಹೆಲೀನಕ್ಕೆ ಪಯಣಿಸುತ್ತಿದ್ದಾಗಿನ ಸಾಧನೆಗಳು. ಸೇಂಟ್ ಹೆಲೀನದಲ್ಲಿ ಪ್ರತಿಕೂಲ ಹವಾಮಾನವಿದ್ದಾಗ್ಯೂ ದಕ್ಷಿಣ ಗೋಲಾರ್ಧದ 341ನಕ್ಷತ್ರಗಳ ಯಾದಿ ತಯಾರಿಸಿ, ಕಿನ್ನರ (ಸೆಂಟಾರಸ್) ನಕ್ಷತ್ರಗುಚ್ಛವನ್ನು ಆವಿಷ್ಕರಿಸಿದ; ಬುಧನ ಯಾಮ್ಯೋತ್ತರ ಗಮನದ (ಟ್ರ್ಯಾನ್ಸಿಟ್) ಸಂಪೂರ್ಣ ವೀಕ್ಷಣೆ ಮಾಡಿದ (1677 ನವೆಂಬರ್ 7).

ಬುಧ ಅಥವಾ ಶುಕ್ರಗ್ರಹದ ಯಾಮ್ಯೋತ್ತರ ಗಮನಗಳನ್ನು ಆಧರಿಸಿ ಸೂರ್ಯ ಮತ್ತು ಭೂಮಿಗಳ ನಡುವಿನ ಅಂತರವನ್ನೂ ಯೋಹನ್ ಕೆಪ್ಲರ್‍ನ (1571-1630) ಮೂರನೆಯ ನಿಯಮ ಉಪಯೋಗಿಸಿ ಸೌರವ್ಯೂಹದ ಪ್ರಮಾಣವನ್ನೂ (ಸ್ಕೇಲ್) ಲೆಕ್ಕಿಸಬಹುದೆಂದು ಸೂಚಿಸಿದವ ಹ್ಯಾಲಿ. ಸಂಶೋಧನ ಪ್ರವಾಸದಿಂದ ಇಂಗ್ಲೆಂಡಿಗೆ ಹಿಂದಿರುಗಿದ ಅನಂತರ (1678) ದಕ್ಷಿಣ ಗೋಲಾರ್ಧದ ನಕ್ಷತ್ರ ಯಾದಿಯನ್ನು ಪ್ರಕಟಿಸಿದ. ಪದವೀಧರನಲ್ಲದಿದ್ದರೂ ತಜ್ಞ ಖಗೋಲವಿಜ್ಞಾನಿಯೆಂದು ಪಂಡಿತ ಸಮೂಹದ ಮನ್ನಣೆಗೆ ಪಾತ್ರನಾದ.

ಪದವಿ ಪರೀಕ್ಷೆಗಳಿಗೆ ಹಾಜರಾಗದಿದ್ದರೂ ರಾಜ 2ನೆಯ ಚಾಲ್ರ್ಸ್‍ನ ಆಣತಿಯಂತೆ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಸ್ನಾತಕ ಪದವಿ ಪ್ರದಾನಿಸಿತು (1678). 22 ವರ್ಷ ವಯಸ್ಸಿನಲ್ಲಿ ರಾಯಲ್ ಸೊಸೈಟಿಯ ಸದಸ್ಯನಾಗಿ ಆಯ್ಕೆಯಾದ (1678). ರಾಬರ್ಟ್ ಹೂಕ್ (1635-1703) ಮತ್ತು ಯೊಹಾನೆಸ್ ಹೆವೆಯ್‍ಲೀಯೂಸ್ (1611-87) ನಡುವೆ ಉದ್ಭವಿಸಿದ್ದ ಸೈದ್ಧಾಂತಿಕ ಸಂಘರ್ಷವನ್ನು ಇತ್ಯರ್ಥಪಡಿಸಲೋಸುಗ ಹ್ಯಾಲಿಯನ್ನು ತನ್ನ ರಾಯಭಾರಿಯಾಗಿ ರಾಯಲ್ ಸೊಸೈಟಿ ಕಳುಹಿಸಿದ್ದು ಆತನ ಬಗ್ಗೆ ಇತರರು ತಳೆದಿದ್ದ ಅಭಿಪ್ರಾಯದ ಸೂಚಕ. ಹೆವೆಯ್‍ಲೀಯೂಸ್ ದೂರದರ್ಶಕ ಗುರಿಕಣ್ಣುಗಳನ್ನು (ಸೈಟ್ಸ್) ಉಪಯೋಗಿಸದೆ ಮಾಡಿದ ಖಾಗೋಲಿಕ ವೀಕ್ಷಣೆಗಳು ನಿಖರವಾಗಿರಲು ಸಾಧ್ಯವಿಲ್ಲ ಎಂಬುದು ಹೂಕ್‍ನ ವಾದದ ತಿರುಳು. ಹೆವೆಯ್‍ಲೀಯೂಸ್ ಮಾಡುತ್ತಿದ್ದ ವೀಕ್ಷಣೆಗಳನ್ನು ಎರಡು ತಿಂಗಳ ಕಾಲ ಪರೀಕ್ಷಿಸಿದ ಬಳಿಕ ಅವು ನಿಖರವಾಗಿವೆ ಎಂದು ಹ್ಯಾಲಿ ತೀರ್ಪಿತ್ತ. ಯಾವುದೇ ಔಪಚಾರಿಕ ಹುದ್ದೆಗೆ ಅಂಟಿಕೊಳ್ಳದೆ ಸ್ವತಂತ್ರವಾಗಿ ಸಂಶೋಧನ ನಿರತನಾಗಿರಲು ಹ್ಯಾಲಿ ಬಯಸುತ್ತಿದ್ದ. ತನ್ನ ಶಾಲಾ ಮಿತ್ರನೊಬ್ಬನೊಂದಿಗೆ ಯುರೋಪ್ ಪ್ರವಾಸ ಕೈಗೊಂಡ (1680). ಪ್ರವಾಸಾವಧಿಯಲ್ಲಿ ಧೂಮಕೇತುವೊಂದನ್ನು ವೀಕ್ಷಸಿದ ಹ್ಯಾಲಿ ಪ್ಯಾರಿಸ್‍ಗೆ ತೆರಳಿ ಜಿಯೊವಿನಿ ಡೊಮೆನಿಕೊ ಕ್ಯಾಸಿನಿಯ (1625-1712) ಜತೆಗೂಡಿ ಆ ಧೂಮಕೇತುವಿನ ಕಕ್ಷೆ ನಿರ್ಧರಿಸಲೋಸುಗ ನಿಖರ ವೀಕ್ಷಣೆಗಳನ್ನು ಮಾಡಿದ. ತದನಂತರ ಬಹಳ ಕಾಲ ಇಟಲಿಯಲ್ಲಿ ಕಳೆದ ಹ್ಯಾಲಿ ಇಂಗ್ಲೆಂಡಿಗೆ ಮರಳಿದ. ವಿವಾಹವಾಗಿ ಕೌಟುಂಬಿಕ ಜವಾಬ್ದಾರಿ ನಿಭಾಯಿಸುವತ್ತ ಹಾಗೂ ಅನಿವಾರ್ಯವಾಗಿ ಇತರ ಕೌಟುಂಬಿಕ ಸಮಸ್ಯೆಗಳನ್ನು ಪರಹರಿಸುವುದರಲ್ಲಿ ತಲ್ಲೀನನಾದ. ಏತನ್ಮಧ್ಯೆ ಕೆಪ್ಲರ್‍ನ 3ನೆಯ ನಿಯಮದಲ್ಲಿ ಆಕರ್ಷಣೆಯ ಪ್ರತಿಲೋಮ ವರ್ಗ ನಿಯಮ ಹುದುಗಿದೆ ಎಂಬ ಅಂಶವನ್ನು ಪರಿಣಾಮಕಾರಿಯಾಗಿ ರಾಯಲ್ ಸೊಸೈಟಿಯ ಸಭೆಯೊಂದರಲ್ಲಿ ಸಾದರ ಪಡಿಸಿದ (1684). ಗ್ರಹಗಳು ದೀರ್ಘವೃತ್ತೀಯ ಕಕ್ಷೆಗಳಲ್ಲಿ ಚಲಿಸುತ್ತವೆ ಎಂಬುದನ್ನು ಈ ನಿಯಮದ ನೆರವಿನಿಂದ ಸಿದ್ಧಪಡಿಸಲು ಸಾಧ್ಯವೇ ಎಂಬುದನ್ನು ಹ್ಯಾಲಿ, ಹೂಕ್ ಮತ್ತು ಸರ್ ಕ್ರಿಸ್ಟಾಫರ್ ರೆನ್ (1632-1723) ಜೊತೆಗೂಡಿ ಪರಿಶೀಲಿಸಿದರೂ ಯಶಸ್ಸು ದೊರೆಯಲಿಲ್ಲ. ಕೇಂಬ್ರಿಜ್‍ನಲ್ಲಿದ್ದ ಸರ್ ಐಸ್ಯಾಕ್ ನ್ಯೂಟನ್‍ನೊಂದಿಗೆ (1643-1727) ಈ ಕುರಿತು ಚರ್ಚಿಸಲೆಂದು ತೆರಳಿದ ಹ್ಯಾಲಿಗೆ ಅವನು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದರೂ ಅದನ್ನು ಪ್ರಕಟಿಸದೆ ಇದ್ದದ್ದು ತಿಳಿಯಿತು. ಪ್ರಿನ್ಸಿಪಿಯ ಮ್ಯಾಥೆಮ್ಯಾಟಿಕ ಬರೆಯುವಂತೆ ನ್ಯೂಟನ್‍ನನ್ನು ಪ್ರೇರೇಪಿಸಿದ್ದಲ್ಲದೆ ಅದಕ್ಕೆ ಅಗತ್ಯವಾದ ಧನಸಹಾಯವನ್ನೂ ಮಾಡಿದ. ಕೌಟುಂಬಿಕ ಸಮಸ್ಯೆಗಳಿಂದಾಗಿ ಹ್ಯಾಲಿಯ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದರಿಂದ ಗ್ರಂಥ ಮಾರಾಟದಿಂದ ಬಂದ ಹಣದಿಂದ ಅವನು ಹೂಡಿದ್ದ ಬಂಡವಾಳವನ್ನು ನ್ಯೂಟನ್ ಹಿಂದಿರುಗಿಸಿದ. ಆದರೂ ಯಾವುದಾದರೂ ಔಪಚಾರಿಕ ಹುದ್ದೆಯನ್ನು ಸ್ವೀಕರಿಸಲೇ ಬೇಕಾದ ಪರಿಸ್ಥಿತಿ ಹ್ಯಾಲಿಯದ್ದಾಗಿತ್ತು. ಆಕ್ಸ್‍ಫರ್ಡ್‍ನಲ್ಲಿ ಖಾಲಿ ಇದ್ದ ಸ್ಯಾವಿಲಿಯನ್ ಚೇರ್ ಆಫ್ ಅಸ್ಟ್ರಾನಮಿ ಹುದ್ದೆಗೆ ಆತ ಅರ್ಜಿ ಸಲ್ಲಿಸಿದ (1691). ವೈಯಕ್ತಿಕ ಕಾರಣಗಳಿಗಾಗಿ ಹ್ಯಾಲಿಯ ವಿರೋಧಿಯಾಗಿದ್ದ ಫ್ಲ್ಯಾಮ್‍ಸ್ಟೀಡ್‍ನಿಂದಾಗಿ ಹುದ್ದೆಯಿಂದ ವಂಚಿತನಾದ. ಇದರಿಂದ ವಿಚಲಿತನಾಗದ ಹ್ಯಾಲಿ ತನ್ನ ಸಂಶೋಧನೆಗಳನ್ನು ಮುಂದುವರಿಸಿದ.

ರಾಯಲ್ ಸೊಸೈಟಿಯ ಪ್ರಕಟಣೆ ಫಿಲಸಾಫಿಕಲ್ ಟ್ರ್ಯಾನ್ಸ್ಯಾಕ್ಷನ್ಸ್‍ನ ಸಂಪಾದಕನಾಗಿ (1685-93) ಹ್ಯಾಲಿ ಸೇವೆ ಸಲ್ಲಿಸಿದ. ಮೊದಲನೆಯ ಮಾಪನಶಾಸ್ತ್ರೀಯ ಪಟ ಎಂದೇ ಪ್ರಸಿದ್ಧವಾದ ಸಾಗರಗಳ ಮೇಲೆ ಅಂದು ಬೀಸುತ್ತಿದ್ದ ಮಾರುತಗಳನ್ನು ತೋರಿಸುವ ಜಾಗತಿಕ ಭೂಪಟ ಪ್ರಕಟಣೆ (1686); ವಿಮಾವಿಜ್ಞಾನ ಕೋಷ್ಟಕ ತಯಾರಿಗೆ ಕಾರಣವಾದ ಬ್ರೆಸ್ಲೌ ನಗರದ ಆಯುಷ್ಯ ಕೋಷ್ಟಕಗಳ ಪ್ರಕಟಣೆ (1693) ಆತನ ಬಹುಮುಖ ಪ್ರತಿಭೆಗೆ ಸಾಕ್ಷಿ.

1695ರ ಆಸುಪಾಸಿನಲ್ಲಿ ಧೂಮಕೇತುಗಳ ಕಕ್ಷೆಯ ಕರಿತು ಅಧ್ಯಯಿಸತೊಡಗಿದ ಹ್ಯಾಲಿ 1682ರಲ್ಲಿ ಗೋಚರಿಸಿದ್ದ ಧೂಮಕೇತು 76 ವರ್ಷಗಳಿಗೊಮ್ಮೆ ಗೋಚರಿಸುತ್ತದೆ ಎಂದು ಸಾಧಿಸಿದ್ದಲ್ಲದೆ ಅದು ಪುನಃ ಡಿಸೆಂಬರ್ 1758ರಲ್ಲಿ ಗೋಚರಿಸುತ್ತದೆಂದು ಭವಿಷ್ಯ ನುಡಿದ (1705). ಅವನ ಭವಿಷ್ಯವಾಣಿ ನಿಜವಾದದ್ದರಿಂದ ಆ ಧೂಮಕೇತು ಹ್ಯಾಲಿ ಧೂಮಕೇತು ಎಂದೇ ಪ್ರಸಿದ್ಧವಾಗಿದೆ. ಗೋಚರಿಸುವ ಅವಧಿಯನ್ನು ನಿಖರವಾಗಿ ಅಂದಾಜಿಸಬಹುದಾದ ಧೂಮಕೇತು ಇದು. ಆಧುನಿಕ ತಂತ್ರವಿದ್ಯೆಯ ಬಳಕೆಯಿಂದ ಧೂಮಕೇತುಗಳ ಸಂರಚನೆ, ಹುಟ್ಟು ಮೊದಲಾದವುಗಳ ಕುರಿತು ಅಧ್ಯಯಿಸಲು ಇದರ ಬರುವಿಕೆ ಸಹಕಾರಿಯಾಗಿದೆ.

ನ್ಯೂಟನ್ ಲಂಡನ್‍ನಲ್ಲಿ ವಾರ್ಡನ್ ಆಫ್ ದಿ ರಾಯಲ್ ಮಿಂಟ್ ಆಗಿ ನೇಮಕಗೊಂಡಾಗ (1696), ಹ್ಯಾಲಿ ಚೆಸ್ಟರ್‍ನಲ್ಲಿ ಟಂಕಸಾಲೆಯ ಉಪನಿಯಂತ್ರಕನಾದ. ಆ ಹುದ್ದೆಯೇ ರದ್ದಾದಾಗ (1898) 3ನೆಯ ವಿಲಿಯಮ್ ಪಶ್ಚಿಮ ಸಾಗರದ ದಕ್ಷಿಣಕ್ಕೆ ಯಾವ ಭೂಭಾಗವಿದೆ ಎಂಬುದನ್ನು ಪತ್ತೆಹಚ್ಚಲೋಸುಗ ಹ್ಯಾಲಿಯನ್ನು ಯುದ್ಧನೌಕೆಯೊಂದರ ಮುಖ್ಯಸ್ಥನಾಗಿ ನೇಮಿಸಿದ. ದಿಕ್ಸೂಚಿ ವ್ಯತ್ಯಯನವನ್ನು ಉಪಯೋಗಿಸಿ ರೇಖಾಂಶವನ್ನು ನಿರ್ಧರಿಸುವ ವಿಧಾನದ ಸಂಶೋಧನೆಯಲ್ಲಿ ಹ್ಯಾಲಿಗೆ ನೆರವು ನೀಡುವುದು ಇದರ ಪ್ರಧಾನ ಉದ್ದೇಶ. ಇಂಗ್ಲೆಂಡಿನ ಪೋಟ್ರ್ಸ್‍ಮೌತ್‍ನಿಂದ ಯಾನ ಆರಂಭಿಸಿದ (ನವೆಂಬರ್ 1698) ಹ್ಯಾಲಿ ಬಾರ್ಬಡಾಸ್ ತಲಪಿದ ಬಳಿಕ ಸಿಬ್ಬಂದಿ ಸಮಸ್ಯೆಗಳಿಂದಾಗಿ ಹಿಂದಿರುಗಬೇಕಾಯಿತು. ತದನಂತರ ಪುನಃ ಒಂದು ವರ್ಷಕಾಲ (ಸೆಪ್ಟೆಂಬರ್ 1699-ಸೆಪ್ಟೆಂಬರ್ 1700) ಅಟ್ಲಾಂಟಿಕ್ ಕರಾವಳಿಗುಂಟ ಅನ್ವೇಷಣೆ ಮಾಡಿದ ಅಧ್ಯಯನದ ಫಲವೇ ಆತ ಪ್ರಕಟಿಸಿದ ದಿಕ್ಸೂಚಿ ವ್ಯತ್ಯಯನದ ಪಟಗಳು. ಸಮಾನ ದಿಕ್ಪಾತ ರೇಖೆಗಳನ್ನು ತೋರಿಸುತ್ತಿದ್ದ ಮೊದಲ ಪಟಗಳು ಎಂಬ ಗೌರವಕ್ಕೆ ಇವು ಪಾತ್ರವಾದವು. ದಕ್ಷಿಣ ಇಂಗ್ಲೆಂಡಿನ ಕರಾವಳಿಗುಂಟ ಪಯಣಿಸಿ ಉಬ್ಬರವಿಳಿತಗಳ ಪ್ರರೂಪವನ್ನು ಅಧ್ಯಯಿಸಿದ. ರಾಣಿ ಆ್ಯನೆಯ ಆದೇಶದ ಮೇರೆಗೆ ಆಡ್ರಿಯಾಟಿಕ್‍ನ ಸುತ್ತಲಿರುವ ಬಂದರುಗಳ ಸ್ಥಿತಿಗತಿಗಳನ್ನು ಪರೀಕ್ಷಿಸಲು, ತದನಂತರ ರಕ್ಷಣೋಪಾಯಗಳ ಬಗ್ಗೆ ಸಲಹೆ ನೀಡಲು ಟ್ರೈಯೆಸ್ಟೆಗೆ ಪಯಣಿಸಿದ.

ಫ್ಲ್ಯಾಮ್‍ಸ್ಟೀಡ್‍ನ ವಿರೋಧವಿದ್ದಾಗ್ಯೂ ಆಕ್ಸ್‍ಫರ್ಡ್‍ನಲ್ಲಿ ಜ್ಯಾಮಿತಿಯ ಸಾವಿಲಿಯನ್ ಪ್ರಾಧ್ಯಾಪಕನಾದ (1704). ಕ್ಲಾಡಿಯಸ್ ಟಾಲೆಮಿಯ (ಕ್ರಿ.ಶ. 1-2) ಅಧ್ಯಯನಗಳನ್ನು ಆಧರಿಸಿ ನಕ್ಷತ್ರಗಳಿಗೆ ಅವುಗಳದ್ದೇ ಆದ ಚಿಕ್ಕ ಚಲನೆಗಳಿವೆ ಎಂದು ತರ್ಕಿಸಿ ಮೂರು ನಕ್ಷತ್ರಗಳಲ್ಲಿ ಆ ಚಲನೆಗಳನ್ನು ಗುರುತಿಸುವುದರಲ್ಲಿ ಯಶಸ್ವಿಯಾದ (1710). ವಿಜ್ಞಾನಿಗಳ ನಡುವೆ ಉದ್ಭವಿಸುವ ಸೈದ್ಧಾಂತಿಕ ಕಲಹಗಳನ್ನು ಪರಿಹರಿಸಲು ರಾಯಲ್ ಸೊಸೈಟಿ ರೂಪಿಸಿದ್ದ ಉಪಸಮಿತಿಯ ಕಾರ್ಯದರ್ಶಿಯಾಗಿ ಅನೇಕ ವಿವಾದಗಳನ್ನು ತೃಪ್ತಿಕರವಾಗಿ ಬಗೆಹರಿಸಿದರೂ ಫ್ಲ್ಯಾಮ್‍ಸ್ಟೀಡ್‍ನೊಂದಿಗಿನ ವೈಯಕ್ತಿಕ ಕಲಹವನ್ನು ಉಲ್ಬಣಗೊಳಿಸುತ್ತಲೇ ಇದ್ದ. ಅವನ ಮರಣಾನಂತರ (1720) ಅಸ್ಟ್ರಾನಮರ್ ರಾಯಲ್ ಸ್ಥಾನ ಹ್ಯಾಲಿಯದ್ದಾಯಿತು.

ಗ್ರೀನ್‍ವಿಚ್ ರಾಯಲ್ ವೀಕ್ಷಣಾಲಯದಲ್ಲಿ ಮೊದಲ ಬಾರಿಗೆ ಸಂಕ್ರಮಮಾಪಕ ಬಳಸಿದ್ದು; ಸಾಗರಯಾನ ಮಾಡುತ್ತಿರುವಾಗ ಚಾಂದ್ರವೀಕ್ಷಣೆಗಳ ನೆರವಿನಿಂದ ರೇಖಾಂಶ ನಿರ್ಧರಿಸುವ ವಿಧಾನದ ಆವಿಷ್ಕಾರ, ಒಂದು 18-ವರ್ಷ ಗ್ರಹಣಾಂತರ ಅವಧಿ ಪೂರ್ತಿ ಚಂದ್ರ ವೀಕ್ಷಣೆ ಮಾಡಿದ್ದು ಈ ಅವಧಿಯ ಸಾಧನೆಗಳು.

ಪ್ರಾಕ್ತನಶಾಸ್ತ್ರ, ಭೂಭೌತವಿಜ್ಞಾನ, ಖಗೋಲವಿಜ್ಞಾನದ ಇತಿಹಾಸ, ಬಹುಪದಿ ಸಮೀಕರಣಗಳನ್ನು ಪರಿಹರಿಸುವುದು ಇವೇ ಮೊದಲಾದವುಗಳಲ್ಲೂ ಹ್ಯಾಲಿ ಆಸಕ್ತನಾಗಿದ್ದ. ಬ್ರಿಟಿಷ್ ವಿಜ್ಞಾನಿ ಸಮುದಾಯ ಸೃಜನಶೀಲತೆಯ ಪರಾಕಾಷ್ಠೆಯನ್ನು ತಲಪಿದ್ದ ಅವಧಿಯಲ್ಲಿ ಅದರ ಅವಿಭಾಜ್ಯ ಘಟಕವಾಗಿದ್ದ ಈ ಜನ್ಮತಃ ಬಹುಮುಖ ಪ್ರತಿಭೆಯ ವಿಜ್ಞಾನಿ 1742 ಜನವರಿ 14 ರಂದು ಗ್ರೀನ್‍ವಿಚ್‍ನಲ್ಲಿ ಮರಣಿಸಿದ. (ಎಸ್.ಎಚ್.ಬಿ.ಎಸ್.)